ಕಂಗನಾ ರಣಾವತ್ ಕಣ್ಣು ಆಲಿಯಾ ಮೇಲೆ...

Kangana Alia
Published on

ಮೈಮಾಟ ಪ್ರದರ್ಶನ ಮತ್ತು ಅಶ್ಲೀಲತೆ ಎಂದಿಗೂ ಕೆಟ್ಟ ಸಿನಿಮಾಗಳನ್ನು ಬದುಕಿಸಲಾರವು ಎಂದು ಇತ್ತೀಚೆಗಷ್ಟೇ ಬಿಡುಗಡೆಯಾದ ‘ಗೆಹ್ರಾಯಿಯಾಂ’ ಚಿತ್ರದ ಬಗ್ಗೆ ಕಂಗನಾ ರಣಾವತ್ ಗುಡುಗಿದ್ದರು. ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾಲೆಳೆದಿದ್ದರು. ಈಗ ಕಂಗನಾ ಕಣ್ಣು ಆಲಿಯಾ ಭಟ್ ಮೇಲೆ ಬಿದ್ದಿದೆ.

ಕಳೆದ ವಾರ ಆಲಿಯಾ ಅಭಿನಯದ ‘ಗಂಗೂಬಾಯಿ ಕಥೈವಾಡಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ ಸಾಕಷ್ಟು ವೈರಲ್ ಆಗಿದೆ. ಅದೆಷ್ಟರ ಮಟ್ಟಿಗೆ ಎಂದರೆ, ಬಹಳಷ್ಟು ಜನ ಆಲಿಯಾ ಅವರನ್ನು ಅನುಕರಣೆ ಮಾಡುತ್ತಿದ್ದಾರೆ. ಅದರಲ್ಲೂ ಕಿಯಾರಾ ಖನ್ನಾ ಎಂಬ ಪುಟ್ಟ ಹುಡುಗಿಯೊಬ್ಬಳು, ಆಲಿಯಾ ತರಹ ಬಟ್ಟೆ ಧರಿಸಿ, ಅದೇ ತರಹ ಮೇಕಪ್ ಮಾಡಿಕೊಂಡು, ಬಾಯಲ್ಲಿ ಕಡ್ಡಿ ಇಟ್ಟುಕೊಂಡು ಡೈಲಾಗ್ ಹೇಳುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಕಂಗನಾ ಸಿಟ್ಟಾಗಿರುವುದು ಇದೇ ಕಾರಣಕ್ಕೆ.

‘ಒಬ್ಬ ವೇಶ್ಯೆಯನ್ನು ಸಣ್ಣ ಹುಡುಗಿಯೊಬ್ಬಳು ಅನುಕರಣೆ ಮಾಡುವುದು ಎಷ್ಟು ಸರಿ? ಬಾಯಲ್ಲಿ ಬೀಡಿ ಇಟ್ಟುಕೊಂಡು, ಕೆಟ್ಟ ಸಂಭಾಷಣೆ ಹೇಳುವುದು ಎಷ್ಟು ಸರಿ? ಈ ಚಿಕ್ಕ ವಯಸ್ಸಿನಲ್ಲಿ ಅವಳಿಗೆ ಇವೆಲ್ಲ ಬೇಕಾ? ಅವಳು ಮಾತ್ರ ಅಲ್ಲ, ಇಂತಹ ಹಲವು ಮಕ್ಕಳನ್ನು ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ. ಮಕ್ಕಳ ಈ ರೀತಿಯ ವಿಡಿಯೋಗಳನ್ನು ಮಾಡುತ್ತಿರುವ ತಂದೆ-ತಾಯಿಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಈ ಬಗ್ಗೆ ಗಮನಹರಿಸಬೇಕು’ ಎಂದು ಕಂಗನಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

‘ಗಂಗೂಬಾಯಿ ಕಥೈವಾಡಿ’ ಚಿತ್ರದಲ್ಲಿ ಆಲಿಯಾ ವೇಶ್ಯೆಯೊಬ್ಬಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net