ಕಾಣೆಯಾದವರ ಹಿಂದಿನ ಕಾಳಜಿ: ಸಿನಿಮಾ ವಿಮರ್ಶೆ

Kaneyadavaru
Published on
  • ಚಿತ್ರ: ಕಾಣೆಯಾದವರ ಬಗ್ಗೆ ಪ್ರಕಟಣೆ
  • ನಿರ್ದೇಶನ: ಅನಿಲ್ ಕುಮಾರ್
  • ನಿರ್ಮಾಣ: ಜಿತೇಂದ್ರ
  • ತಾರಾಗಣ: ರಂಗಾಯಣ ರಘು, ರವಿಶಂಕರ್, ತಬಲಾ ನಾಣಿ, ಚಿಕ್ಕಣ್ಣ, ಆಶಿಕಾ ಮುಂತಾದವರು

| ಚೇತನ್ ನಾಡಿಗೇರ್ ಬೆಂಗಳೂರು

ಆ ಮೂವರದ್ದು ವಿಭಿನ್ನ ಯೋಚನೆಗಳು, ವಿಭಿನ್ನ ಮನಸ್ಥಿತಿಗಳು. ಆದರೂ ಅವರನ್ನು ಗಟ್ಟಿಯಾಗಿ ಹಿಡಿದಿಡುವುದು ಹಲವು ವರ್ಷಗಳ ಸ್ನೇಹ. ಆ ಮೂವರು ಒಟ್ಟಿಗೆ ಓದುತ್ತಾರೆ, ಒಟ್ಟಿಗೆ ಬೆಳೆಯುತ್ತಾರೆ, ಒಂದಿಷ್ಟು ವರ್ಷ ದೂರಿದ್ದವರು, ಅದೊಂದು ದಿನ ನಿಗೂಢವಾಗಿ ಊರು ಬಿಟ್ಟು ಬ್ಯಾಂಕಾಕ್ ಸೇರಿಕೊಳ್ಳುತ್ತಾರೆ. ಅಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರೂ, ಒಳಗೊಳಗೇ ಏನೋ ಭಯ? ಹೇಳಿಕೊಳ್ಳಲಾಗದ ಆತಂಕ. ಇಷ್ಟಕ್ಕೂ ಅವರ್ಯಾರು? ಬ್ಯಾಂಕ್ಯಾಕ್​ಗೆ ಹೋಗಿದ್ದು ಯಾಕೆ? ಅವರ ಹಿನ್ನೆಲೆ ಏನು? ಅವರ ಭಯ ಏನು? ಉತ್ತರ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದಲ್ಲಿದೆ.

ಕಾಣೆಯಾದವರೆಲ್ಲ ಸುಮ್ಮನೆ ಆಗಿರುವುದಿಲ್ಲ, ಅವರ ಹಿಂದೆ ಒಂದು ಕಥೆ ಇರುತ್ತದೆ ಎಂದು ಹೇಳುವ ಪ್ರಯತ್ನವನ್ನು ನಿರ್ದೇಶಕ ಅನಿಲ್ ಕುಮಾರ್ ಮಾಡಿದ್ದಾರೆ. ಚಿತ್ರದಲ್ಲಿ ಮೂರು ಕಾಲಘಟ್ಟಗಳಿವೆ. ಮೂರು ವ್ಯಕ್ತಿಗಳ ಕಥೆ ಇವೆ. ಇದಲ್ಲದೆ ಸಾಕಷ್ಟು ವಿಷಯಗಳಿವೆ. ಅವೆಲ್ಲವನ್ನೂ ಫ್ಲಾಶ್​ಬ್ಯಾಕ್​ಗಳ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಒಬ್ಬರ ಕಥೆಯನ್ನು ಇನ್ನೊಬ್ಬರ ಬಾಯಲ್ಲಿ, ಇನ್ನೊಬ್ಬರ ಕಥೆಯನ್ನು ಮತ್ತೊಬ್ಬರ ದೃಷ್ಟಿಕೋನದಲ್ಲಿ ತೋರಿಸಲಾಗಿದೆ. ಹಾಗಾಗಿ, ಯಾರು ಏನು ಹೇಳುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ಕೆಲವೊಮ್ಮೆ ಲೆಕ್ಕಕ್ಕೆ ಸಿಗದಂತಾಗುತ್ತದೆ. ಅದಕ್ಕೆಲ್ಲ ಒಂದು ಸ್ಪಷ್ಟತೆ ಸಿಗಬೇಕೆಂದರೆ, ಕ್ಲೈಮ್ಯಾಕ್ಸ್​ವರೆಗೂ ಕಾಯಬೇಕು. ಅಷ್ಟರಲ್ಲಿ ಆತುರ ತೋರಿದರೆ, ಚಿತ್ರ ರುಚಿಸುವುದು ಕಷ್ಟವಾಗುತ್ತದೆ.

ಇಲ್ಲಿ ನಿರ್ದೇಶಕರು ಹಲವು ಸಂದೇಶಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ, ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ, ತೃತೀಯ ಲಿಂಗಿಗಳಿಗೆ ಗೌರವ ಕೊಡಿ, ಹೆಣ್ಮಕ್ಕಳು ಯಾರಿಗೇನೂ ಕಡಿಮೆ ಇಲ್ಲ, ಯಾವತ್ತೂ ಪಾಸಿಟಿವ್ ಆಗಿ ಯೋಚನೆ ಮಾಡಿ, ಯಾರನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡಬೇಡಿ ... ಹೀಗೆ ಚಿತ್ರದುದ್ದಕ್ಕೂ ಹಲವು ಕಾಳಜಿಗಳಿವೆ. ಅವೆಲ್ಲವನ್ನೂ ಮನರಂಜನಾತ್ಮಕವಾಗಿಯೇ ದಾಟಿಸುವ ಪ್ರಯತ್ನವಾಗಿದೆಯಾದರೂ, ಕೆಲವೊಮ್ಮೆ ಸಂದೇಶಗಳ ಓವರ್​ಡೋಸ್ ಆಗುತ್ತಿವೆ ಎಂದನಿಸದೇ ಇರದು. ಚಿತ್ರದ ಹೈಲೈಟ್ ಎಂದರೆ ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ ಅಭಿನಯ. ಮೂವರೂ ಸಲೀಸಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಆಶಿಕಾ ರಂಗನಾಥ್​ಗೆ ಹೆಚ್ಚು ಕೆಲಸವಿಲ್ಲ. ಚಿಕ್ಕಣ್ಣ, ಸಂಪದ, ತಿಲಕ್ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಾರೆ. ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿರುವ ಅನಿಲ್​ಗೆ

ತಮ್ಮ ಇತಿಮಿತಿ ಗೊತ್ತಿದೆ. ಹಾಗಾಗಿ, ತಮ್ಮ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕೋ, ಅಷ್ಟೇ ಕೊಟ್ಟಿದ್ದಾರೆ ಎನ್ನುವುದು ಖುಷಿಯ ವಿಚಾರ. ಆರಂಭದಿಂದ ಕೊನೆಯವರೆಗೂ ಸಾಕಷ್ಟು ವಿಷಯಗಳು ಬಂದು ಹೋಗುವುದರಿಂದ ಸಂಗೀತ, ಛಾಯಾಗ್ರಹಣ ಮುಂತಾದ ತಾಂತ್ರಿಕ ಅಂಶಗಳ ಬಗ್ಗೆ ವಿಶೇಷ ಗಮನ ಹೋಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net