

ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿ ತಮಿಳು ನಟ ಕಮಲ್ ಹಾಸನ್ ಕನ್ನಡಿಗರಿಂದ ಛೀಮಾರಿ ಒಳಗಾಗಿರುವುದು ಗೊತ್ತಿದೆ. ಅಲ್ಲದೇ, ನಟನ ‘ಥಗ್‌ಲೈಫ್’ ಚಿತ್ರ ಪ್ರದರ್ಶನಕ್ಕೆ ರಾಜ್ಯದಲ್ಲಿ ಸಹಕಾರ ನೀಡದ ಕಾರಣ ಸದ್ಯ ಈ ಪ್ರಕರಣ ಕೋರ್ಟ್ ಅಂಗಳದಲ್ಲಿದೆ. ಅದರ ನಡುವೆಯೇ ಕನ್ನಡದಲ್ಲಿ ‘ಕಮಲ್ ಶ್ರೀದೇವಿ’ ಎಂಬ ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದ್ದು, ಈಗಾಗಲೇ ಅರ್ಧ ಶೂಟಿಂಗ್ ಕೂಡ ಮುಗಿಸಿದೆ. ಹಾಗಾದರೆ ಇದು ಕಮಲ್ ಹಾಸನ್ ಕುರಿತ ಚಿತ್ರವಾ? ಕಮಲ್ ಹಾಗೂ ಶ್ರೀದೇವಿ ನಟಿಸಿರುವ ಸಿನಿಮಾದ ರಿಮೇಕ್ ಇರಬಹುದೇ? ಎಂಬ ಹಲವಾರು ಪ್ರಶ್ನೆಗಳು ಕೇಳಿಬಂದಿದ್ದವು. ಇದಕ್ಕೆ ಚಿತ್ರದ ನಾಯಕ ಸಚಿನ್ ಚಲುವರಾಯಸ್ವಾಮಿ, ‘‘ಕಮಲ್ ಶ್ರೀದೇವಿ’ ಟೈಟಲ್ ಎರಡು ವರ್ಷಗಳ ಹಿಂದೆಯೇ ನಾವು ನೋಂದಾಯಿಸಿಕೊಂಡಿದ್ದೆವು. ಕಥೆಯಲ್ಲಿ ಕಮಲ್ ಮತ್ತು ಶ್ರೀದೇವಿ ಎರಡು ಪಾತ್ರಗಳಿರುವ ಕಾರಣ ಅದಕ್ಕೆ ಈ ಟೈಟಲ್ ಸೂಕ್ತ ಎಂದು ನಿರ್ಧರಿಸಿದೆವು. ಇತ್ತೀಚೆಗೆ ನಡೆದ ಬೆಳವಣಿಗೆಗೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಕಮಲ್ ಹಾಸನ್ ಕುರಿತ ಸಿನಿಮಾ ಅಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ‘ಹ್ಯಾಪಿ ಬರ್ತ್‌ಡೇ’, ‘ಬೆಂಗಳೂರು ಬಾಯ್ಸ’ ಬಳಿಕ ಕೃಷಿ ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್ ನಟಿಸುತ್ತಿರುವ ಮೂರನೇ ಸಿನಿಮಾ ‘ಕಮಲ್ ಶ್ರೀದೇವಿ’. ಇದೊಂದು ಮರ್ಡರ್-ಮಿಸ್ಟರಿ ಕಥೆಯಾಗಿದ್ದು, ‘ಗಜರಾಮ’ ಖ್ಯಾತಿಯ ವಿ.ಎ. ಸುನೀಲ್‌ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ 56 ದಿನಗಳ ಕಾಲ ಶೂಟಿಂಗ್ ಮುಗಿಸಿರುವ ಚಿತ್ರತಂಡ ಇನ್ನು 10 ದಿನಗಳ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ. ಪ್ರಮುಖವಾಗಿ ಏಳು ಪಾತ್ರಗಳಿದ್ದು ಕಿಶೋರ್, ಮಿತ್ರ, ಉಮೇಶ್, ಅಕ್ಷಿತಾ ಬೋಪಯ್ಯ, ಪ್ರವೀಣ್ ಕುಮಾರ್, ಕಾರ್ತಿಕ್ ಕಲಾಬಳಗದಲ್ಲಿದ್ದಾರೆ.