

ಚಿತ್ರ: ಇಂಡಿಯನ್ 2
ನಿರ್ದೇಶನ: ಶಂಕರ್
ನಿರ್ಮಾಣ : ಲೈಕಾ ಪ್ರೊಡಕ್ಷನ್ಸ್
ತಾರಾಗಣ: ಕಮಲ್ ಹಾಸನ್, ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಬಾಬಿ ಸಿಂಹ, ಸಮುತಿರಕಣಿ ಮುಂತಾದವರು.
| ಹರ್ಷವರ್ಧನ್ ಬ್ಯಾಡನೂರು
ಮದ್ಯಪಾನ ಮತ್ತು ಧೂಮಪಾನಗಳ ಬಗೆಗಿನ ಸೂಚನೆಗಳ ಜತೆಗೆ "ಭ್ರಷ್ಟಾಚಾರದಿಂದ ದೇಶಕ್ಕೆ ಕ್ಯಾನ್ಸರ್ ಉಂಟಾಗುತ್ತದೆ. ಭ್ರಷ್ಟಾಚಾರ ಕೊಲ್ಲುತ್ತದೆ' ಎಂಬ ವಿಶೇಷ ಸೂಚನೆಯೊಂದಿಗೆ "ಇಂಡಿಯನ್ 2' ಪ್ರಾರಂಭವಾಗುತ್ತದೆ. ಅಲ್ಲಿಗೆ ಭ್ರಷ್ಟರ ವಿರುದ್ಧ ಸೇನಾಪತಿ ಸಮರ ಇಲ್ಲೂ ಮುಂದುವರಿಯಲಿದೆ ಎಂಬ ಅಂಶ ಗೊತ್ತಾಗುತ್ತದೆ.
ಶಂಕರ್ ನಿರ್ದೇಶನದಲ್ಲಿ, ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ 1996ರ ಸಿನಿಮಾ "ಇಂಡಿಯನ್' ಸೂಪರ್ಹಿಟ್ ಎನಿಸಿಕೊಂಡಿತ್ತು. ಇದೀಗ 28 ವರ್ಷಗಳ ನಂತರ ಅದರ ಮುಂದುವರಿದ ಕಥೆ ಬಂದಿದೆ. ಮೊದಲ ಭಾಗದಲ್ಲಿ ಸೇನಾಪತಿಯ ವಯಸ್ಸು 70ರ ಆಸುಪಾಸು ಎನ್ನಲಾಗಿತ್ತು. 60ಕ್ಕೆ ಅರಳು&ಮರಳು ಎನ್ನುವಾಗ, 28 ವರ್ಷಗಳ ಬಳಿಕ ವಾಪಸ್ಸಾಗುವ 100 ವರ್ಷದ "ಇಂಡಿಯನ್ ತಾತಾ'ನಿಂದ ಶಂಕರ್ ಎಲ್ಲ ರೀತಿಯ ಆ್ಯಕ್ಷನ್ ಮಾಡಿಸಿದ್ದಾರೆ. ಬಾಡಿ ಬಿಲ್ಡರ್ಗಳ ಮಧ್ಯೆ ಈ ಸೆಂಚುರಿ ಸೇನಾಪತಿ ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ್ದೂ ಇದೆ. ಆತನಿಗೆ ಹಲವಾರು ಜನರನ್ನು ಬಡಿಯುವಷ್ಟು ಶಕ್ತಿಯಿದೆ, "ವರ್ಮ ಕಲೆ'ಯಿಂದ ಕೇವಲ ಎರಡೇ ಬೆರಳುಗಳಲ್ಲಿ ದುಷ್ಟರನ್ನು ಪ್ರತಿಮೆಗಳಂತೆ ನಿಲ್ಲಿಸುವಷ್ಟು ತಾಕತ್ತಿದೆ, ನೂರಾರು ಜನರಿಂದ ತಪ್ಪಿಸಿಕೊಂಡು 60 ಕಿಲೋಮೀಟರ್ ವೇಗದಲ್ಲಿ ಯೂನಿಸೈಕಲ್ ಓಡಿಸುವ ಚಾಕಚಕ್ಯತೆಯಿದೆ. ಹೀಗಾಗಿಯೇ ನಿರ್ದೇಶಕ ಶಂಕರ್ ಚಿತ್ರವನ್ನು ಇಂದಿನ ಪೀಳಿಗೆಗೆ ಹತ್ತಿರವಾಗಿಸಲು ಏನೇ ಸರ್ಕಸ್ ಮಾಡಿದರೂ, "ಇಂಡಿಯನ್ 2' ನೈಜತೆಗೆ ಸ್ವಲ್ಪ ದೂರವೇ ಉಳಿದಿದೆ. ಮೊದಲ ಭಾಗದಲ್ಲಿ ತಮಿಳುನಾಡಿನಲ್ಲೇ ಕಥೆ ನಡೆದರೆ, ಈ ಸೀಕ್ವೆಲ್ನಲ್ಲಿ ಸೇನಾಪತಿ ತೈಪೆಯಿಂದ ಜರ್ನಿ ಪ್ರಾರಂಭಿಸಿ ಜಮ್ಮು ಕಾಶ್ಮೀರ, ಪಂಜಾಬ್, ಗುಜರಾತ್, ಒಡಿಶಾ ಅಂತ ಪ್ಯಾನ್ ಇಂಡಿಯಾ ಓಡಾಡಿದ್ದಾರೆ.
ಚಿತ್ರ ಅರವಿಂದನ್ (ಸಿದ್ಧಾರ್ಥ್), ಆರತಿ (ಪ್ರಿಯಾ) ಸೇರಿ ನಾಲ್ವರು ಗೆಳೆಯರು "ಬಾರ್ಕಿಂಗ್ ಡಾಗ್ಸ್' ಎಂಬ ಯೂಟ್ಯೂಬ್ ಚಾನಲ್ ಮೂಲಕ ದುಷ್ಟರು ಮತ್ತು ಭ್ರಷ್ಟರ ವಿರುದ್ಧ ಹೋರಾಕ್ಕಿಳಿದಿರುತ್ತಾರೆ. ಭಾರತದಲ್ಲಿ ಭ್ರಷ್ಟಾಚಾರವನ್ನು ಬುಡಸಮೇತವಾಗಿ ಕೀಳಲು "ಇಂಡಿಯನ್ ತಾತಾ' ಸೇನಾಪತಿ ವಾಪಸ್ ಬರಲೇಬೇಕು ಅಂತ ಅವರಿಗೆ ಅನ್ನಿಸುತ್ತದೆ. ಹೀಗಾಗಿ ಜಾಲತಾಣದಲ್ಲಿ ಕಮ್ಬ್ಯಾಕ್ ಇಂಡಿಯನ್ ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡಿಸುತ್ತಾರೆ. ಅವರ ಆಸೆಯಂತೆ ಇಂಡಿಯನ್ ತಾತಾ ವಾಪಸ್ ಬರುತ್ತಾನೆ. ಭ್ರಷ್ಟರ ವಿರುದ್ಧ ಸಮರ ಸಾರುತ್ತಾನೆ. ಆದರೆ, ಕಥೆ ಸಾಗಿದಂತೆ ಸೇನಾಪತಿಯನ್ನು ಕರೆಸಿಕೊಂಡ ಇವರು ಸೇರಿ ದೇಶಾದ್ಯಂತ ಜನ ಆತನ ವಿರುದ್ಧ ತಿರುಗಿ ಬೀಳುತ್ತಾರೆ. ಗೋ ಬ್ಯಾಕ್ ಅಂತ ಟ್ರೆಂಡ್ ಶುರು ಮಾಡುತ್ತಾರೆ. ಅದಕ್ಕೆ ಕಾರಣವೇನು? ಸೇನಾಪತಿ ಏನು ಮಾಡುತ್ತಾನೆ? ಮುಂದೇನಾಗುತ್ತೆ? ಎಂಬುದೇ "ಇಂಡಿಯನ್ 2'. 180 ನಿಮಿಷಗಳ "ಇಂಡಿಯನ್ 2' ಮೊದರ್ಲಧ ನಿಧಾನವೆನಿಸಿದರೂ, ದ್ವೀತಿಯಾರ್ಧ ಅನಿರೀತ ಟ್ವಿಸ್ಟ್ಗಳಿಂದ ವೇಗ ಪಡೆದಿದೆ. ಕ್ಲೆಮ್ಯಾಕ್ಸ್ನಲ್ಲಿ "ಇಂಡಿಯನ್ 3 & ವಾರ್ ಮೋಡ್'ಗೆ ಲಿಂಕ್ ನೀಡಲಾಗಿದೆ. ತೆರೆಯ ಮೇಲೆ ಹಬ್ಬದಂತೆ ಕಾಣುವ ಚಿತ್ರ, ಥಿಯೇಟರ್ನಿಂದ ಹೊರಬರುವಾಗ ಕಾಡುವುದಿಲ್ಲ. ಆದರೆ "ಇಂಡಿಯನ್ 2' ಒಂದೊಳ್ಳೆ ಥಿಯೇಟರ್ ಅನುಭವ ನೀಡುವ ಸಿನಿಮಾ.