

ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರವನ್ನು ನೋಡಿದ ಕಾಲಿವುಡ್ನ ಜನಪ್ರಿಯ ನಟ ಕಮಲ್ ಹಾಸನ್, ರಿಷಭ್ ಶೆಟ್ಟಿಗೆ ಫೋನ್ ಮಾಡಿ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ ಸುದ್ದಿ ಬಂದಿತ್ತು. ಈಗ ಅವರು ರಿಷಭ್ಗೆ ಪತ್ರ ಬರೆದಿದ್ದು, ಅವರು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಕಾಂತಾರ' ನೋಡಿ ಖುಷಿಯಾಗಿರುವ ಕಮಲ್ ಹಾಸನ್, ಅದನ್ನು ತಮ್ಮ ಪತ್ರದಲ್ಲಿ ಹಂಚಿಕೊಂಡಿದ್ದಾರೆ. 'ನಿಮ್ಮ ಸಿನಿಮಾದ ಬಗ್ಗೆ ನಾನು ತಕ್ಷಣಕ್ಕೆ ಏಕೆ ಏನೂ ಬರೆಯಲಿಲ್ಲ. ಇಂತಹ ಸಿನಿಮಾಗಳು ನಮ್ಮ ಮನದಲ್ಲಿ ಉಳಿದುಕೊಳ್ಳಬೇಕು, ಅರಳಬೇಕು. ನಿಮ್ಮ ಸಿನಿಮಾದ ಕೊನೆಯ ದೃಶ್ಯದಲ್ಲಿ ದೇವರು ತಂದೆಗಿಂತ ಹೆಚ್ಚಾಗಿ ತಾಯಿಯಂತೆ ವರ್ತಿಸುತ್ತಾನೆ. ಇದು ಇಷ್ಟವಾಯಿತು' ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದಕ್ಕೆ ಧನ್ಯವಾದ ಸಲ್ಲಿಸಿರುವ ರಿಷಭ್, 'ಭಾರತೀಯ ಸಿನಿಮಾದ ಲೆಜೆಂಡ್ ಒಬ್ಬರಿಂದ ಇಂಥದ್ದೊಂದು ಸಂದೇಶ ಬಂದಿರುವುದು ಹೃದಯ ತುಂಬಿ ಬಂದಿದೆ. ಇಂಥದ್ದೊಂದು ಅಮೂಲ್ಯವಾದ ಗಿಫ್ಟ್ಗೆ ಧನ್ಯವಾದಗಳು' ಎಂದು ರಿಷಭ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ ಶ್ರುತಿ ಹಾಸನ್?
'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.