ಕಲ್ಕಿ ಚಿತ್ರದಲ್ಲಿ ಕಲಿ ಪಾತ್ರಧಾರಿ ಕಮಲ್ ಹಾಸನ್​​ ಅಂದುಕೊಂಡವರಿಗೆ ಇಲ್ಲಿದೆ ರೋಚಕ ಟ್ವಿಸ್ಟ್!

Kalki
Published on

ಹೈದರಾಬಾದ್​: ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆಯಾಗಿ ಸುಮಾರು ಒಂದು ತಿಂಗಳು ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಅದರ ಪ್ರಭಾವ ಸ್ವಲ್ಪವೂ ಕಡಿಮೆಯಾಗಿಲ್ಲ. ನಾಗ್ ಅಶ್ವಿನ್ ನಿರ್ದೇಶನದ, ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಈ ಚಿತ್ರ 1000 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿ ಉದ್ಯಮದಲ್ಲಿ ಅಚ್ಚರಿ ಮೂಡಿಸಿದೆ. ಯಶಸ್ವಿ ಪ್ರದರ್ಶನದ ನಡುವೆ ಕಲ್ಕಿ ಸಿನಿಮಾ ಕುರಿತು ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.

ಕಲ್ಕಿ ಚಿತ್ರದ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿರುವ ನಿತಿನ್ ಜಿಹಾನಿ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ, ಕಲ್ಕಿ ಸೀಕ್ವೆಲ್ ಬಗ್ಗೆ ಸೆನ್ಸೇಷನಲ್ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಕಲ್ಕಿ ಸಿನಿಮಾ ನೋಡಿದ ಅನೇಕರು ಕಮಲ್ ಹಾಸನ್ ಅವರೇ ಕಲಿ ಎಂದೇ ಭಾವಿಸಿದ್ದಾರೆ. ಆದರೆ ಅವರಲ್ಲ ಎಂದು ಜಿಹಾನಿ ಹೇಳಿದ್ದಾರೆ. ಸದ್ಯ ಕಲ್ಕಿ ಸಿನಿಮಾದಲ್ಲಿ ತೋರಿಸಿರುವುದು ಒಂದೇ ಒಂದು ಕಾಂಪ್ಲೆಕ್ಸ್​ ಮಾತ್ರ ಎಂದು ಸಂದರ್ಶನದಲ್ಲಿ ನಿತಿನ್ ಜಿಹಾನಿ ಹೇಳಿದ್ದಾರೆ.

ಪ್ರಪಂಚದ ವಿವಿಧ ಭಾಗಗಳಲ್ಲಿ ಏಳು ಕಾಂಪ್ಲೆಕ್ಸ್​ ಇರುತ್ತವೆ. ನೀವು ಕಲ್ಕಿಯಲ್ಲಿ ಒಂದೇ ಒಂದು ಕಾಂಪ್ಲೆಕ್ಸ್​ ನೋಡುತ್ತೀರಿ. ಸುಪ್ರೀಂ ಯಾಸ್ಕಿನ್ ಇವುಗಳ ನಾಯಕ. ಆದರೆ ಅವನು ಅದೃಶ್ಯ ಶಕ್ತಿಯ ಅಡಿಯಲ್ಲಿ ಕೆಲಸ ಮಾಡುತ್ತಾನೆ. ಆ ಶಕ್ತಿ ಯಾವುದು? ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಸಿಗಬೇಕಾದರೆ, ನೀವದನ್ನು ತೆರೆಯ ಮೇಲೆಯೇ ನೋಡಬೇಕು ಎಂದು ನಿತಿನ್ ಜಿಹಾನಿ ಬಿಗ್ ಟ್ವಿಸ್ಟ್ ನೀಡಿದ್ದಾರೆ.

ಕಲಿ ಪಾತ್ರಧಾರಿ ಕಮಲ್ ಅಲ್ಲ ಎನ್ನುವುದಾದರೆ, ಮತ್ಯಾರು ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ಕಲಿ ಮತ್ತು ಸುಪ್ರೀಂ ಯಾಸ್ಕಿನ್ ಬೇರೆ ಬೇರೆ ಎಂಬುದು ಜಿಹಾನಿ ನೀಡಿದ ಹೇಳಿಕೆಯಿಂದ ಇದೀಗ ಸ್ಪಷ್ಟವಾಗಿದೆ. ಹಾಗಾದರೆ ಕಲಿಯ ಪಾತ್ರವನ್ನು ಯಾವ ನಾಯಕ ನಿರ್ವಹಿಸುತ್ತಿದ್ದಾನೆ? ಎಂದು ಅಭಿಮಾನಿಗಳು ಇದೀಗ ಯೋಚಿಸತೊಡಗಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಏನೋ ದೊಡ್ಡದಾಗಿ ಪ್ಲಾನ್​ ಮಾಡಿದಂತಿದೆ. ಈ ಸಿನಿಮಾ ಹಲವು ಭಾಗಗಳಲ್ಲಿ ಬರುವ ಸಾಧ್ಯತೆ ಇದ್ದು, ಕಲ್ಕಿಯ ಸೀಕ್ವೆಲ್‌ನಲ್ಲಿ ಎಷ್ಟು ವಿಚಿತ್ರಗಳು ಅಡಗಿವೆ ಎಂದು ತಿಳಿಯಬೇಕಾದರೆ, ಚಿತ್ರ ಬರುವವರೆಗೆ ಕಾಯಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net