

ಬೆಂಗಳೂರು: ಯುವ ಪ್ರತಿಭೆ ಸಂಜಯ್ ಪುರಾಣಿಕ್ ನಿರ್ದೇಶನದ ಮೊದಲ ಸಿನಿಮಾ ‘ಕಾಲವೇ ಮೋಸಗಾರ’. 2019ರಲ್ಲಿಯೇ ಸಿನಿಮಾ ಸೆಟ್ಟೇರಿ, ಚಿತ್ರೀಕರಣ ಪೂರ್ಣಗೊಳಿಸಿತ್ತು. ಚಿತ್ರದ ಹಾಡು ಮತ್ತು ಟ್ರೇಲರ್‌ಗೆ ನಟ ಪುನೀತ್ ರಾಜಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೇನು ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವಾಗ ಕರೊನಾ ಹಾವಳಿ ಹಾಗೂ ಕೆಲವು ಅನಿವಾರ್ಯ ಕಾರಣಗಳಿಂದಾಗಿ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ 20ರಂದು ತೆರೆಗೆ ಬರಲಿದೆ. ಈ ರೊಮ್ಯಾಂಟಿಕ್ ಆ್ಯಕ್ಷನ್ ಕಾಮಿಡಿಯಲ್ಲಿ ಭರತ್ ಸಾಗರ್ ಹಾಗೂ ಯಶಸ್ವಿನಿ ರವೀಂದ್ರ ಮುಖ್ಯಭೂಮಿಕೆಯಲ್ಲಿದ್ದಾರೆ. ನಟ ವಸಿಷ್ಠ ಸಿಂಹ ಇತ್ತೀಚೆಗೆ ಚಿತ್ರದ ಟ್ರೇಲರ್ ಮತ್ತು ಪ್ರೊಮೋ ಸಾಂಗ್ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಸಂಜಯ್, ‘ಇಂಜಿನಿಯರಿಂಗ್ ಮುಗಿಸಿದ ಬಳಿಕ ಸಿನಿಮಾ ಬಗ್ಗೆ ಆಸಕ್ತಿ ಹೆಚ್ಚಾಗಿ ನಿರ್ದೇಶನ ಮಾಡಬೇಕು ಎಂದು ನಿರ್ಧರಿಸಿದೆ. ಅದರ ಲವೇ ‘ಕಾಲವೇ ಮೋಸಗಾರ’. 2019ರಲ್ಲಿ ಸಿನಿಮಾ ಮುಗಿದಿತ್ತು. ಆದರೆ, ಮುಂದೆ ಎದುರಾದ ಸಮಸ್ಯೆಗಳಿಂದಾಗಿ ರಿಲೀಸ್ ತಡವಾಯಿತು. ಆರಂಭದಿಂದ ಕ್ಲೈಮ್ಯಾಕ್ಸ್‌ವರೆಗೆ ಕುತೂಹಲ ಮೂಡಿಸುವ ಕಥೆ ಇದಾಗಿದ್ದು, ಸಮಯ ಗೆಲ್ಲುತ್ತಾ ಅಥವಾ ವ್ಯಕ್ತಿ ಗೆಲ್ತಾನಾ ಅನ್ನುವುದರ ಜತೆಗೆ ಪ್ರೀತಿ, ಸ್ವಾರ್ಥ ಎರಡು ಒಂದೇ ಕಡೆ ಇರಬಾರದು ಎನ್ನುವುದನ್ನು ತಿಳಿಸುತ್ತದೆ. ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ’ ಎಂದರು. ನಾಯಕ ಭರತ್ ಸಾಗರ್, ‘ಈ ಮೊದಲು ಮಾಡೆಲಿಂಗ್, ರಂಗಭೂಮಿಯಲ್ಲಿದ್ದ ನಾನು ಇದೇ ಸಿನಿಮಾ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಗೆ ಆಗಮಿಸಿದೆ. ಇದೊಂದು ಲವ್ ಸಬ್ಜೆಕ್ಟ್ ಆಗಿದ್ದು, ಆ್ಯಕ್ಷನ್, ಫೈಟ್ ಸೇರಿ ಮನರಂಜನೆ ನೀಡುವ ಎಲ್ಲ ಅಂಶಗಳಿವೆ’ ಎಂದು ಮಾಹಿತಿ ನೀಡಿದರು. ವಿಜಯ್ ಚೆಂಡೂರು ಕಲಾ ಬಳಗದಲ್ಲಿದ್ದಾರೆ. ಕೆ.ಲೋಕೇಶ್ ಸಂಗೀತ, ಕ್ರಾಂತಿಕುಮಾರ್ ಛಾಯಾಗ್ರಹಣ, ರಿತ್ವಿಕ್ ಸಂಕಲನವಿದೆ.