ಮಹೇಶ್ VS ವಿಜಯ್: 12 ದಿನಗಳಲ್ಲಿ 'ಕಲಾವತಿ', 'ಅರೇಬಿಕ್ ಕುತ್ತು' ಹಾಡುಗಳಿಗೆ ಯೂಟ್ಯೂಬ್​ನಲ್ಲಿ ಎಷ್ಟು ವೀಕ್ಷಣೆಗಳು?

Published on
ಸೂಪರ್‌ಸ್ಟಾರ್ ಹಾಗೂ ಟಾಲಿವುಡ್​ನ ಪ್ರಿನ್ಸ್ ನಟ ಮಹೇಶ್ ಬಾಬು ಅವರ ಮುಂಬರುವ ಚಿತ್ರ 'ಸರ್ಕಾರು ವಾರಿ ಪಟ'ದ 'ಕಮ್ ಆನ್ ಕಮ್ ಆನ್... ಕಲಾವತಿ...' ಹಾಡು ಫೆಬ್ರವರಿ 14 ರಂದು ರಿಲೀಸ್ ಆಗಿ, ಕೇವಲ 12 ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಬರೋಬ್ಬರಿ 50 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಸದ್ಯ, ಈ ಹಾಡು ವಿವಿಧ ಸಂಗೀತ ವೇದಿಕೆಗಳಲ್ಲಿ ಟಾಪ್ ವಿವಿಧ 10 ಟ್ರೆಂಡ್‌ಗಳ ಪಟ್ಟಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರು ಈ ಹಾಡಿನ ರೀಲ್ಸ್ ವಿಡಿಯೋಗಳು ಕಂಡುಬರುತ್ತವೆ. 4.02 ನಿಮಿಷಗಳ 'ಕಲಾವತಿ' ಹಾಡನ್ನು ಅನಂತ ಶ್ರೀರಾಮ್ ಅವರು ಬರೆದಿದ್ದು, ಎಸ್.ತಮನ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಸಿದ್ ಶ್ರೀರಾಮ್ ಅವರು ಹಾಡಿದ್ದಾರೆ.
ಮತ್ತೊಂದೆಡೆ, ತಮಿಳಿನ ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಚಿತ್ರೀಕರಣ ಮುಗಿದಿದ್ದು, ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇನ್ನು, ಈ ಚಿತ್ರದ 'ಅರೇಬಿಕ್ ಕುತ್ತು' ಕೂಡಾ ಫೆಬ್ರವರಿ 14 ರಂದು ಬಿಡುಗಡೆಯಾಗಿದ್ದು, ಸೂಪರ್ ಡೂಪರ್ ಹಿಟ್ ಆಗಿದೆ. ಸದ್ಯ, 'ಅರೇಬಿಕ್ ಕುತು' ಹಾಡು ಯೂಟ್ಯೂಬ್​ನಲ್ಲಿ 12 ದಿನಗಳು 7 ಗಂಟೆಗಳಲ್ಲಿ 100 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ಅತ್ಯಂತ ವೇಗವಾಗಿ ಪಡೆದ ತಮಿಳು ಹಾಡಾಗಿದೆ. ಈ ಹಾಡು ಕೂಡಾ ಬಿಡುಗಡೆಯಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಸಾವಿರ ಸಾವಿರ ರೀಲ್ಸ್ ವಿಡಿಯೋಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡಿದ್ದು, ಜೋನಿಟಾ ಗಾಂಧಿ ಹಾಗೂ ಅನಿರುದ್ಧ್ ಹಾಡಿದ್ದಾರೆ.
ಇನ್ನು ಮಹೇಶ್ ಮತ್ತು ವಿಜಯ್ ಅಭಿಮಾನಿಗಳ ನಡುವೆ ಇರುವ ಕಾಂಪಿಟಿಷನ್ ಎಲ್ಲರಿಗೂ ತಿಳಿದಿದೆ. ಈ ಮುಂಬರುವ ಎರಡು ಸಿನಿಮಾಗಳ ಎರಡು ಹಾಡುಗಳು ಒಂದೇ ದಿನ ಅಂದರೆ ಫೆಬ್ರವರಿ 14 ರಂದು ಬಿಡುಗಡೆಯಾಗುತ್ತಿವೆ ಎಂದು ಗೊತ್ತಾದಾಗಲೇ, ಮಹೇಶ್ ಮತ್ತು ವಿಜಯ್ ಅಭಿಮಾನಿಗಳ ನಡುವೆ ಆನ್​ಲೈನ್ ಜಗಳ ಶುರುವಾಯಿತು. ವಿಜಯ್ ಅಭಿಮಾನಿಗಳು ಹೆಚ್ಚು ವೀಕ್ಷಣೆಗಳು ಮತ್ತು ಲೈಕ್ಸ್ ಪಡೆಯಲು ತಪ್ಪು ದಾರಿ ತುಳಿಯುತ್ತಾರೆ ಎಂದು ಮಹೇಶ್ ಅಭಿಮಾನಿಗಳು ಆರೋಪಿಸಿದರು. ಇನ್ನು, ವಿಜಯ್ ಅಭಿಮಾನಿಗಳು ಕೂಡಾ ಇದೇ ಆರೋಪವನ್ನು ಮಹೇಶ್ ಅಭಿಮಾನಿಗಳ ಮೇಲೆ ಹೊರಿಸಿದರು.
ಇದೀಗ, ಎರಡೂ ಹಾಡುಗಳು ಬಿಡುಗಡೆಯಾಗಿದ್ದು, 'ಕಲಾವತಿ' ಮತ್ತು 'ಅರೇಬಿಕ್ ಕುತ್ತು' ಎರಡೂ ಕೂಡಾ ಸೂಪರ್ ಹಿಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ದಾಖಲೆಗಳನ್ನು ಮುರಿದಿವೆ. ಆದರೆ, ನಟ ವಿಜಯ್ ಅವರ 'ಅರೇಬಿಕ್ ಕುತ್ತು' ಹಾಡಿಗೆಯೇ ಹೆಚ್ಚು ವೀಕ್ಷಣೆಗಳು ಮತ್ತು ಲೈಕ್ಸ್ ಬಂದಿದ್ದು, ಮಹೇಶ್ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಹಾಗಾಗಿ, ಇಬ್ಬರೂ ನಟರ ನಡುವಿನ ಹಗ್ಗಜಗ್ಗಾಟ ಈಗಲೂ ಮುಂದುವರಿದಿದ್ದು, ಈ ಕಾಂಪಿಟಿಷನ್ ಮತ್ತು ಜಗಳ ಎರಡೂ ಸಿನಿಮಾಗಳು ತೆರೆಗಪ್ಪಳಿಸಿದ ನಂತರವೂ ಮುಂದುವರಿಯಲೆದೆ ಎಂದೇ ಹೇಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net