ಕಾಲಾಂತಕನ ಹಣೆಬರಹ ಗೀಚುವ ಅರ್ಚನಾ

NB 2
Published on

ಬೆಂಗಳೂರು: ‘ಕೆಜಿಎಫ್; ಚಾಪ್ಟರ್ 1’ ಬಿಡುಗಡೆ ಆಗಿದ್ದೇ ತಡ, ಆ ಸಿನಿಮಾದಲ್ಲಿ ನಟಿಸಿದ ಬಹುತೇಕ ಎಲ್ಲ ಪ್ರಮುಖ ಕಲಾವಿದರಿಗೆ ಸಾಲು ಸಾಲು ಸಿನಿಮಾ ಅವಕಾಶಗಳ ಬಾಗಿಲು ತೆರೆದವು. ಆ ಪೈಕಿ ರಾಕಿಯ ತಾಯಿ ಪಾತ್ರ ನಿಭಾಯಿಸಿದ್ದ ಅರ್ಚನಾ ಜೋಯಿಸ್ ಸಹ ಒಬ್ಬರು.

ಕನ್ನಡದ ನಾಲ್ಕೈದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಅರ್ಚನಾ, ‘ಕಾಲಾಂತಕ’ ಶೀರ್ಷಿಕೆಯ ಸಿನಿಮಾ ಮುಗಿಸಿ ಬಂದಿದ್ದಾರೆ. ಇಲ್ಲಿ ಅವರದ್ದು ಬರಹಗಾರ್ತಿ ಪಾತ್ರ. ಹಾಗಾದರೆ ಏನಿದು ‘ಕಾಲಾಂತಕ’? ಮಾರ್ಕಂಡೇಯ ಪುರಾಣದಲ್ಲಿ ಬರುವ ಕಾಲಾಂತಕ ಪದವನ್ನೇ ಆಯ್ದುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಅಂಬರೀಶ್ ಎಂ. ಸಮಯ ಮತ್ತು ಸಾವನ್ನು ಗೆದ್ದವನಿಗೆ ‘ಕಾಲಾಂತಕ’ ಎಂದು ಕರೆಯಲಾಗುತ್ತದೆ. ಆ ಸಾವು ಮತ್ತು ಸಮಯವನ್ನು ಪ್ರಧಾನವಾಗಿಟ್ಟುಕೊಂಡು, ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಅಂಬರೀಶ್.

ಈ ಹಿಂದೆ ‘ಜ್ವಲಂತಂ’ ಎಂಬ ಸಿನಿಮಾ ನಿರ್ದೇಶಿಸಿದ ಅನುಭವ ಇವರಿಗಿದೆ. ‘ಸಿನಿಮಾದಲ್ಲಿ ನಾನು ಓರ್ವ ಬರಹಗಾರ್ತಿಯಾಗಿ ಕಾಣಿಸಿಕೊಳ್ಳುತ್ತೇನೆ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿಸಿದ್ದು, ಸೆನ್ಸಾರ್​ನಲ್ಲಿದೆ. ಹೊಸ ರೀತಿಯ ಪಾತ್ರ ನಿಭಾಯಿಸಿದ ಖುಷಿ ಇದೆ’ ಎನ್ನುವ ಅರ್ಚನಾ, ಸದ್ಯ ‘ನಕ್ಷೆ’, ‘ಹೊಂದಿಸಿ ಬರೆಯಿರಿ’, ‘ಮುಂದ್ ಒಂದ್ ದಿನ’ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ‘ಕಾಲಾಂತಕ’ ಸಿನಿಮಾದಲ್ಲಿ ಯಶ್ ಶೆಟ್ಟಿ, ಕೆ.ಪಿ. ಶ್ರೀಧರ್ ಚೇತನ್ ಪೂಜಾರಿ, ಧಮೇಂದ್ರ ಅರಸ್, ಕಡ್ಡಿಪುಡಿ ಚಂದ್ರ ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ. ‘ರಂಗ್​ಬಿರಂಗಿ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಶಾಂತಕುಮಾರ್ ಈ ಚಿತ್ರ ನಿರ್ವಣದ ಜವಾಬ್ದಾರಿ ಹೊತ್ತಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ, ಹಾಲೇಶ್ ಛಾಯಾಗ್ರಹಣ ಮಾಡಿರುವ ‘ಕಾಲಾಂತಕ’ ಜ.9ಕ್ಕೆ ಟೀಸರ್ ಬಿಡುಗಡೆ ಮಾಡಿಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net