

ಮುಂಬೈ: ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ತ್ರಿಭಂಗ' ಚಿತ್ರದಲ್ಲಿ ನಟಿಸಿದ್ದೇ ಕೊನೆ. ಆ ನಂತರ ಕಾಜೋಲ್ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಸದ್ಯ ಕಾಜೋಲ್ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರದ ಕಾರಣ, ಇನ್ನೊಂದು ವರ್ಷ ಆಕೆಯ ಯಾವ ಚಿತ್ರವೂ ಬಿಡುಗಡೆಯಾಗುವುದಿಲ್ಲ.
ಕಾಜೋಲ್ ಮೊದಲಿನಿಂದಲೂ ಚೂಸಿ. ಹಾಗೆಲ್ಲ ಬಂದ ಅವಕಾಶಗಳನ್ನೆಲ್ಲ ತಾನು ಒಪ್ಪಿಕೊಂಡಿಲ್ಲ, ಒಪ್ಪಿಕೊಳ್ಳುವುದೂ ಇಲ್ಲ ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ಹಾಗೆ ನೋಡಿದರೆ, ಅವರು ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ಒಂದು ನಿರ್ಧಾರ ತೆಗೆದುಕೊಂಡಿದ್ದರಂತೆ ಮತ್ತು ಆ ನಿರ್ಧಾರ ಪ್ರಕಾರವೇ ಇಷ್ಟು ವರ್ಷ ಸಾಗಿಬಂದಿದ್ದಾಗಿ ಹೇಳಿಕೊಂಡಿದ್ದಾರೆ.
ಇಷ್ಟಕ್ಕೂ ಆ ತೀರ್ಮಾನವನೇನು? 'ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಮತ್ತು ನನಗೆ ಕಂಫರ್ಟ್ ಎಂದನಿಸಿದರೆ ಮಾತ್ರ ಚಿತ್ರ ಮಾಡಬೇಕು ಎಂದು ನಾನು ಮೊದಲೇ ತೀರ್ಮಾನಿಸಿದ್ದೆ. ಅದರಲ್ಲೂ ಬಡತನದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಏಕೆಂದರೆ, ನಾನು ಬಡವಳಂತೆ ಕಾಣುವುದಿಲ್ಲ. ಹಾಗಾಗಿ, ಇಷ್ಟು ವರ್ಷಗಳ ಕಾಲ ಶ್ರೀಮಂತಿಕೆಯ ಹಿನ್ನೆಲೆ ಇರುವ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದೇನೆ' ಎಂದು ಕಾಜೋಲ್ ಹೇಳಿದ್ದಾರೆ.