ಕಾಜಲ್ ಪಾತ್ರಕ್ಕೆ ಕತ್ತರಿ; ಆಚಾರ್ಯಕ್ಕೀಗ ಒಬ್ಬಳೇ ನಾಯಕಿ

Kajal
Published on

ಚಿರಂಜೀವಿ ಅಭಿನಯದ ತೆಲುಗು ಚಿತ್ರ ‘ಆಚಾರ್ಯ’ ಬಿಡುಗಡೆಯಾಗುವುದಕ್ಕೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಏ.29ಕ್ಕೆ ಬಿಡುಗಡೆಯಾಗುತ್ತಿದ್ದು, ಈ ಮಧ್ಯೆ ಕಾಜಲ್ ಅಗರವಾಲ್ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ. ‘ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ಅಗರವಾಲ್ ನಟಿಸಿದ್ದರು. ಹಲವು ದಿನಗಳ ಕಾಲ ಚಿತ್ರೀಕರಣದಲ್ಲೂ ಭಾಗವಹಿಸಿದ್ದರು. ಚಿತ್ರೀಕರಣ ಸಂಪೂರ್ಣವಾಗಿ ರಷಸ್ ನೋಡಿದ ನಂತರ, ಚಿತ್ರ ಬಹಳ ದೊಡ್ಡದಾಗುತ್ತಿದೆ ಎಂದು ಚಿತ್ರತಂಡಕ್ಕೆ ಅನಿಸಿದೆ.

ಚಿತ್ರದ ಅಳತೆಯನ್ನು ಎಲ್ಲಿ ಕಡಿಮೆ ಮಾಡುವುದು ಎಂದು ಯೋಚಿಸುತ್ತಿದ್ದಾಗ, ಕಾಜಲ್ ಪಾತ್ರಕ್ಕೇಕೆ ಕತ್ತರಿ ಹಾಕಬಾರದು ಎಂಬ ಸಲಹೆ ಚಿತ್ರತಂಡದಿಂದ ಬಂದಿದೆ. ಹೇಗೂ ಚಿತ್ರದ ಕಥೆಯಲ್ಲಿ ಕಾಜಲ್ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇರಲಿಲ್ಲವಂತೆ. ಆಕೆ ಚಿರಂಜೀವಿ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದರಿಂದ, ಆ ಭಾಗವನ್ನು ಕೈಬಿಡುವ ತೀರ್ವನಕ್ಕೆ ಚಿತ್ರತಂಡ ಬಂದಿದೆ. ಅದರಂತೆ ಕಾಜಲ್ ಪಾತ್ರಕ್ಕೆ ಕತ್ತರಿ ಹಾಕಿದೆ.

ಈಗ ಚಿತ್ರದಲ್ಲಿ ಪೂಜಾ ಹೆಗ್ಡೆ ಮಾತ್ರ ನಾಯಕಿಯಾಗಿ ಇರಲಿದ್ದಾರೆ. ‘ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ, ರಾಮ್ರಣ್ ತೇಜ, ಪೂಜಾ ಹೆಗ್ಡೆ, ಸೋನು ಸೂದ್ ಮುಂತಾದವರು ನಟಿಸಿದ್ದು, ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net