ಕಾಜಲ್ ಅಗರ್​ವಾಲ್ v/s ಸಮಂತಾ ಫೆ.12ರಂದು ಕ್ಲಾಶ್ ಆಗಲಿದ್ದಾರೆ ಸ್ಟಾರ್ ನಟಿಯರು

Kajal
Published on

ಬೆಂಗಳೂರು: ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುವುದು ಹೊಸದೇನಲ್ಲ. ಆದರೆ, ಇಬ್ಬರು ಸ್ಟಾರ್ ನಟಿಯರು ಕ್ಲಾಶ್ ಆಗುವುದು ಅಪರೂಪ. ಫೆಬ್ರವರಿ 12ರಂದು ಅಂಥದ್ದೊಂದು ಘಟನೆ ನಡೆಯಲಿದೆ. ಅಂದು ಕಾಜಲ್ ಅಗರ್​ವಾಲ್ ಮತ್ತು ಸಮಂತಾ ಮುಖಾಮುಖಿಯಾಗುತ್ತಿರುವುದು ವಿಶೇಷ. ಅಂದು ಅವರಿಬ್ಬರ ಚಿತ್ರಗಳು ಬಿಡುಗಡೆಯಾಗುತ್ತಿರಬಹುದು ಅಂದುಕೊಂಡರೆ ಅದು ತಪು್ಪ. ಈ ಬಾರಿ ಚಿತ್ರಗಳಲ್ಲ, ಕಾಜಲ್ ಮತ್ತು ಸಮಂತಾ ಅಭಿನಯದ ವೆಬ್​ಸೀರೀಸ್​ಗಳು ಒಂದೇ ದಿನ ಸ್ಟ್ರೀಮ್ ಆಗಲಿವೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್​ಸರಣಿಯಲ್ಲಿ ಸಮಂತಾ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಮನೋಜ್ ಬಾಜಪೇಯಿ, ಪ್ರಿಯಮಾಣಿ ಮುಂತಾದವರು ನಟಿಸಿರುವ ಈ ವೆಬ್​ಸರಣಿ ಫೆಬ್ರವರಿ 12ರಂದು ಅಮೆಜಾನ್ ಪ್ರೖೆಮ್ಲ್ಲಿ ಸ್ಟ್ರೀಮ್ ಆಗಲಿದೆ. ಇದು ಸಮಂತಾ ಅಭಿನಯದ ಮೊದಲ ವೆಬ್​ಸರಣಿಯಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅದೇ ದಿನ, ಕಾಜಲ್ ಅಗರ್​ವಾಲ್ ಅಭಿನಯದ ‘ಲೈವ್ ಟೆಲಿಕಾಸ್ಟ್’ ಎಂಬ ವೆಬ್​ಸರಣಿ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಿ ಪ್ರದರ್ಶನವಾಗಲಿದೆ. ತಮಿಳಿನ ಜನಪ್ರಿಯ ನಿರ್ದೇಶಕ ವೆಂಕಟ್ ಪ್ರಭು, ಈ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಕಾಜಲ್, ಜನಪ್ರಿಯ ಟಿವಿ ಕಾರ್ಯಕ್ರಮವೊಂದರ ನಿರ್ದೇಶಕಿಯಾಗಿ ಅಭಿನಯಿಸಿದ್ದಾರೆ. ಈ ಎರಡೂ ವೆಬ್​ಸರಣಿಗಳು ಒಂದೇ ದಿನ ಬೇರೆಬೇರೆ ಓವರ್ ದಿ ಟಾಪ್ (ಓಟಿಟಿ)ಗಳಲ್ಲಿ ಸ್ಟ್ರೀಮ್ ಆಗಲಿದ್ದು, ಇಬ್ಬರಲ್ಲಿ ಯಾರಿಗೆ ಹೆಚ್ಚು ಅಂಕ ಸಿಗುತ್ತದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net