

ಹಳ್ಳಿಯಲ್ಲಿ ಸಣ್ಣಪುಟ್ಟ ರಾಬರಿ ಮಾಡಿಕೊಂಡಿದ್ದ ಮೂವರು ಹುಡುಗರು, ದೊಡ್ಡ ಉದ್ದೇಶ ಹೊತ್ತು ನಗರಕ್ಕೆ ಆಗಮಿಸುತ್ತಾರೆ. ಯಾವುದೇ ಹಿನ್ನೆಲೆ ಇಲ್ಲದೆ ಬೆಂಗಳೂರಿಗೆ ಬರುವ ಅವರೆಲ್ಲ ಅಂದುಕೊಂಡಿದ್ದನ್ನು ಸಾಧಿಸುತ್ತಾರಾ? ಇದು ‘ಕಾಗೆ ಮೊಟ್ಟೆ’ ಚಿತ್ರದ ಒನ್ಲೈನ್ ಕಥೆ. ನಟ ಜಗ್ಗೇಶ್ ಅವರ ಹಿರಿ ಮಗ ಗುರುರಾಜ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಇಂದು (ಅ.1) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡುವ ಗುರು, ‘ಪ್ರತಿಯೊಬ್ಬರಿಗೂ ಒಂದೊಂದು ಲೈಫ್ ಇರುತ್ತದೆ. ಸ್ನೇಹದ ಬೆಲೆ ಏನೆಂಬುದೇ ಈ ಚಿತ್ರದ ಕಥೆ. ಸ್ನೇಹ-ಸಂಬಂಧದ ಕಥೆ ಇರುವ ಚಿತ್ರಗಳು ಯಾವತ್ತಿಗೂ ಹೊಸದಾಗಿರುತ್ತವೆ’ ಎನ್ನುತ್ತಾರೆ.
ಚಂದ್ರಹಾಸ ನಿರ್ದೇಶನದ ಈ ಚಿತ್ರವನ್ನು ಸುಬ್ಬರಾಯುಡು ಮತ್ತು ಎಚ್.ಎನ್. ಶ್ರೀನಿವಾಸಯ್ಯ ನಿರ್ವಿುಸಿದ್ದಾರೆ. ಗುರು ಜತೆಗೆ ಕೆ. ಮಾದೇಶ್, ಹೇಮಂತ್, ತನುಜಾ ಮುಂತಾದವರು ನಟಿಸಿದ್ದಾರೆ. ಕೊಳ್ಳೆಗಾಲ, ಚಾಮರಾಜನಗರ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿನ ಮೂರು ಹಾಡುಗಳಿಗೆ ಶ್ರೀವತ್ಸ ಸಂಗೀತ ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಕವಿರಾಜ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಒಂದು ಹಾಡಿಗೆ ಜಗ್ಗೇಶ್ ಧ್ವನಿ ನೀಡಿದ್ದಾರೆ. ಪಿ.ಎಲ್ ರವಿ ಛಾಯಾಗ್ರಹಣ ಈ ಚಿತ್ರಕ್ಕಿದೆ.