ಬಿಕ್ಕಟ್ಟಿನ ನಡುವೆ ‘ಕಾಗದ’ದಲ್ಲಿ ಅರಳಿದ ಪ್ರೀತಿ

FotoJet (1)
Published on

ಶಿವ ಸ್ಥಾವರಮಠ

ಚಿತ್ರ: ಕಾಗದ
ನಿರ್ದೇಶಕ: ರಂಜಿತ್ ಕುಮಾರ್
ತಾರಾಗಣ: ಆದಿತ್ಯ ಕೆರೆಗೌಡ, ಅಂಕಿತಾ ಜಯರಾಮ್, ನೇಹಾ ಪಾಟೀಲ್, ಮಠ ಕೊಪ್ಪಳ, ನೀನಾಸಂ ಅಶ್ವತ್ಥ್, ಬಾಲ ರಾಜವಾಡಿ ಮತ್ತಿತರರು.

ಧರ್ಮ-ಧರ್ಮಗಳ ನಡುವಿನ ಬಿಕ್ಕಟ್ಟು ಸಮಾಜದ ಸಾಮರಸ್ಯ ಹಾಳು ಮಾಡಿಬಿಡುತ್ತವೆ. ಪಡೆದುಕೊಂಡ ಪ್ರೀತಿ, ಕಟ್ಟಿಕೊಂಡ ಮನೆ ಹಾಗೂ ಊರಿನ ನೆಮ್ಮದಿಯನ್ನು ಕಸಿದುಕೊಂಡು ಬಿಡುತ್ತವೆ. ಇಂತಹ ಬಿಕ್ಕಟ್ಟು ಸೃಷ್ಟಿಸಿದ ಕಥೆಯನ್ನು ‘ಕಾಗದ’ದ ಮೂಲಕ ನಿರೂಪಿಸಿದ್ದಾರೆ ನಿರ್ದೇಶಕ ರಂಜಿತ್ ಕುಮಾರ್.

ಐತಿಹಾಸಿಕ ಭೈರವಕೋಟೆಯಲ್ಲಿ ಜನರು ರಾಗ-ದ್ವೇಷ ಇಲ್ಲದೇ ಅನಾದಿಕಾಲದಿಂದಲೂ ಸೌಹಾರ್ದದಿಂದ ಜೀವನ ನಡೆಸುತ್ತಿರುತ್ತಾರೆ. ಈ ಊರಿನ ಪ್ರತಿಭೆ ಶಿವು (ಆದಿತ್ಯ). ಓದಿನಲ್ಲಿ ಸದಾ ಮುಂದು. ಚೆನ್ನಾಗಿ ಓದಿ, ಊರಿನಲ್ಲಿ ಆರಂಭವಾಗುವ ಆಸ್ಪತ್ರೆಯಲ್ಲಿ ವೈದ್ಯನಾಗಬೇಕು ಎಂಬ ಮಹಾತ್ವಾಕಾಂಕ್ಷೆ ಹೊಂದಿದಾತ. ಈತನ ಕಾಲೇಜಿಗೆ ಆಕಸ್ಮಿಕವಾಗಿ ಆಯೆಷಾ (ಅಂಕಿತಾ) ಆಗಮಿಸುತ್ತಾಳೆ. ಆಕೆ ಬುದ್ಧಿವಂತೆ. ಅಪ್ಪನ ಆಸೆಯಂತೆ ಪೈಲಟ್ ಆಗುವ ಕನಸು ಹೊತ್ತವಳು. ಈ ಇಬ್ಬರ ನಡುವೆ ಹುಟ್ಟುವ ಪ್ರೀತಿ ಊರಿನವರ ಬಾಯಿಗೆ ಸರಕಾಗುತ್ತದೆ. ಈ ನಡುವೆ ಆಯೆಷಾ ಮನೆಗೆ ಬೆಂಕಿ ಬಿದ್ದು, ಇಡೀ ಕುಟುಂಬ ಬೇರೆ ಊರಿಗೆ ಸ್ಥಳಾಂತರವಾಗುತ್ತಾರೆ. ಸಂವಹನಕ್ಕಾಗಿ ಈ ಪ್ರೇಮಿಗಳು ಕಾಗದವನ್ನೇ ಮಾಧ್ಯಮವನ್ನಾಗಿಸಿಕೊಳ್ಳುತ್ತಾರೆ. ಬಳಿಕ ಕಥೆ ತಿರುವು ಪಡೆದುಕೊಂಡು, ಮತ್ತಷ್ಟು ಬಿಕ್ಕಟ್ಟುಗಳನ್ನು ಎದುರಿಸುವುದೇ ಚಿತ್ರದ ಕಥೆ.

ಸೂಕ್ಷ್ಮ ವಿಷಯವೊಂದನ್ನು ನಿರ್ದೇಶಕರು ಸರಳವಾಗಿ ಹೇಳಿದ್ದಾರೆ. 2005ರಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರವಿದು. ಆಗಿನ್ನು ಎಲ್ಲರ ಕೈಯಲ್ಲೂ ಮೊಬೈಲ್ ಇರಲಿಲ್ಲ. ಪ್ರೇಮಿಗಳಿಗೆ ಪತ್ರಗಳೇ ಭಾವನೆಗಳ ಸೇತುವೆಯಾಗಿದ್ದವು. ಹಾಗಾಗಿ ಈ ಚಿತ್ರಕ್ಕೆ ‘ಕಾಗದ’ ಎಂದು ಹೆಸರಿಟ್ಟಿದ್ದಾರೆ. ಮೊದಲರ್ಧದಲ್ಲಿ ಕಥೆ ನಿಧಾನಗತಿ ಅನಿಸಿದರೂ, ದ್ವಿತೀಯಾರ್ಧದಲ್ಲಿ ವೇಗ ಪಡೆದು ಕ್ಲೈಮ್ಯಾಕ್ಸ್‌ನಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ನಾಯಕ ಆದಿತ್ಯ, ಪಾತ್ರಕ್ಕೆ ಇನ್ನಷ್ಟು ಜೀವ ತುಂಬಬಹುದಿತ್ತು. ಅಂಕಿತಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನೇಹಾ ಪಾಟೀಲ್, ಬಾಲ ರಾಜವಾಡಿ, ಮಠ ಕೊಪ್ಪಳ, ನೀನಾಸಂ ಅಶ್ವತ್ಥ್ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಛಾಯಾಗ್ರಹಣ ಗ್ರಾಮ್ಯ ವಾತಾವರಣ ಸೃಷ್ಟಿಸುತ್ತದೆ. ಸಾಹಿತ್ಯ ಚೆನ್ನಾಗಿ ಮೂಡಿಬಂದಿದೆ. ಧರ್ಮ ಇರುವುದು ಬದುಕಲು, ಕೊಲ್ಲಲಲ್ಲ ಎಂಬ ಸಂದೇಶ ನೀಡುವ ‘ಕಾಗದ’ವನ್ನು ಒಮ್ಮೆ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net