kadumale film review: ಕಾಡುಮಳೆಯಲ್ಲಿ ಭಾವನೆಗಳ ಸಂಘರ್ಷ

kadu male 2
Published on

ಚಿತ್ರ: ಕಾಡುಮಳೆ

ನಿರ್ದೇಶನ: ಸಮರ್ಥ್ ಮಂಜುನಾಥ್

ತಾರಾಗಣ: ಸಂಗೀತ ರಾಜಾರಾಮ್, ಅರ್ಥ್ ಹರ್ಷನ್

ಶಿವ ಸ್ಥಾವರಮಠ

ಜೀವನದಲ್ಲಿ ಹಲವರು ಇದೇ ವಾಸ್ತವ ಎಂದು ಭ್ರಮೆಯಲ್ಲಿ ಬದುಕುತ್ತಿರುತ್ತಾರೆ. ಆ ಭ್ರಮೆಯು ಮುಂದೊಂದು ದಿನ ಆತಂಕಕ್ಕೆ ಎಡೆಮಾಡಿಕೊಟ್ಟಾಗ ನೈಜತೆಯನ್ನು ಅರಿಯಲು ತಡಕಾಡುತ್ತಾರೆ. ಅಷ್ಟರೊಳಗೆ ನೋವು, ಸಂಕಟ ಎಲ್ಲವನ್ನೂ ಅನುಭವಿಸುತ್ತಾರೆ. ಇಂತಹ ಭಾವನೆಗಳ ತಾಕಲಾಟದಲ್ಲಿ ‘ಕಾಡುಮಳೆ’ ನಿರೂಪಿತವಾಗಿದೆ.

ಲವ್ ಬ್ರೇಕಪ್‌ನಿಂದ ನೊಂದಿರುವ ಮೀರಾ (ಸಂಗೀತಾ) ತನ್ನ ಜೀವನವನ್ನು ಅಂತ್ಯಗೊಳಿಸಬೇಕು ಎಂದು ಹೊರಡುತ್ತಾಳೆ. ಆದರೆ, ಅನಿರೀಕ್ಷಿತವಾಗಿ ಕಾಡುಮಳೆ ಎಂಬ ನಿಗೂಢ ಸ್ಥಳಕ್ಕೆ ಹೋಗಿಬಿಡುತ್ತಾಳೆ. ಅಲ್ಲಿ ಆಕೆಗೆ ಒಂದಿಷ್ಟು ಅಚ್ಚರಿಗಳು ಎದುರಾಗುತ್ತವೆ. ಜತೆಗೆ ತನ್ನನ್ನೇ ಹೋಲುವ ಹಲವು ವ್ಯಕ್ತಿಗಳನ್ನು ಆಕೆ ಕಾಣುತ್ತಾಳೆ. ಅಷ್ಟಕ್ಕೂ ಇವೆರೆಲ್ಲ ಯಾರು? ಈ ಕಾಡುಮಳೆ ಅಚ್ಚರಿ ಏನು? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅವುಗಳಿಗೆ ಉತ್ತರ ಬೇಕಾದರೆ, ‘ಕಾಡುಮಳೆ’ ನೋಡಬೇಕು.

ನಿರ್ದೇಶಕ ಸಮರ್ಥ್ ಒಂದು ವಿಭಿನ್ನ ಕಥೆ ಹೇಳಿದ್ದಾರೆ. ಇಲ್ಲಿ ಜೀವನದ ಅಧ್ಯಾತ್ಮ, ಸೈಕಾಲಜಿ, ವಿಜ್ಞಾನ ಎಲ್ಲವೂ ಇದೆ. ಇಡೀ ಕಥೆಯಲ್ಲಿ ಒಂದಿಷ್ಟು ಪ್ರಶ್ನೆಗಳಿದ್ದು, ಅವುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಹಾಗಾಗಿ, ‘ಕಾಡುಮಳೆ’ ಜೀವನಕ್ಕೆ ಹತ್ತಿರವಾಗುತ್ತದೆ. ಇಡೀ ಕಥೆಯು ಕಾಡು ಬಿಟ್ಟು ಕದಲುವುದಿಲ್ಲ. ಒಂದೇ ಸ್ಥಳವಾದರೂ ಕಥೆ ಹೆಣೆದ ರೀತಿ ಚೆನ್ನಾಗಿದೆ. ಕ್ಷಣಕ್ಕೂ ಕ್ಷಣಕ್ಕೂ ಕುತೂಹಲ, ಅಚ್ಚರಿಯನ್ನು ಹಿದಿದಿಟ್ಟುಕೊಳ್ಳುತ್ತದೆ. ಹಾಗಾಗಿ ಸಿನಿಮಾ ನೋಡಿಸಿಕೊಳ್ಳುತ್ತದೆ. ಜತೆಗೆ ಸಮರ್ಥ್ ಪ್ರೇಕ್ಷಕರ ಮೆದುಳಿಗೆ ಸ್ವಲ್ಪ ಕೆಲಸ ಕೊಟ್ಟಿದ್ದಾರೆ.

ಚಿತ್ರದಲ್ಲಿರುವುದು ಎರಡೇ ಪಾತ್ರಗಳು. ಸಂಗೀತಾ ಮತ್ತು ಅರ್ಥ. ಸಂಗೀತಾ ಇಡೀ ಸಿನಿಮಾ ಆವರಿಸಿದ್ದಾರೆ. ಉತ್ಸಾಹದಿಂದ ಮೊದಲಿನಿಂದ ಕ್ಲೈಮ್ಸಾಕ್ಸ್‌ವರೆಗೆ ನಟಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಬರುವ ಅರ್ಥ ವಿಭಿನ್ನ ಮ್ಯಾನರಿಸಂನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ಲಸ್ ಪಾಯಿಂಟ್ ಎಂದರೆ, ಕಾರ್ತಿಕ್ ಭಟ್ ಸಂಭಾಷಣೆ ಹಾಗೂ ಛಾಯಾಗ್ರಹಣ. ಜೀವನದ ಒಳನೋಟ, ದೃಷ್ಟಿಕೋನ ಸಾರುವ ಡೈಲಾಗ್, ಸಂಭಾಷಣೆ ಮನಸ್ಸಿಗೆ ಆಪ್ತವಾಗುತ್ತವೆ. ಇಡೀ ಕಾಡನ್ನು ರಾಜು ಮೈಸೂರು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಕಥೆ ಪ್ರಶ್ನೆಯಲ್ಲಿಯೇ ಮುಗಿದಿದ್ದು, ಸದ್ಯಕ್ಕೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net