

ಬೆಂಗಳೂರು: ಉಪೇಂದ್ರ ಅಭಿನಯದ 'ಕಬ್ಜ' ಚಿತ್ರ ಬಿಡುಗಡೆಯಾಗುವುದಕ್ಕೆ ಇನ್ನೆರಡು ವಾರಗಳಷ್ಟೇ ಇದೆ. ಇದುವರೆಗೂ ಟೀಸರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರದ ಟ್ರೇಲರ್ ಯಾವಾಗ ಬಿಡುಗಡೆಯಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಆ ಪ್ರಶ್ನೆಗೆ ಕೊನೆಗೂ ಉತ್ತರ ಸಕ್ಕಿದೆ.
ಮಾರ್ಚ್ 4ರ ಶನಿವಾರ ಸಂಜೆ 5 ಗಂಟೆ 2 ನಿಮಿಷಕ್ಕೆ 'ಕಬ್ಜ' ಚಿತ್ರದ ಎಲ್ಲಾ ಭಾಷೆಗಳ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಲಿದೆ.
ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಉಪೇಂದ್ರ ಜತೆಗೆ ಸುದೀಪ್ ಶ್ರೇಯಾ ಶರಣ್, ಮುಕೇಶ್ ಶರ್ಮ, ನವಾಬ್ ಷಾ, ಅನೂಪ್ ರೇವಣ್ಣ ಸೇರಿದಂತೆ ಹಲವರರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತ ಮತ್ತು ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದೆ.
‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ತನ್ನದಾಗಿಸಿಕೊಂಡಿದೆ, ಉತ್ತರ ಭಾರತದಲ್ಲೇ 1800ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಿದೆ.