

ಬೆಂಗಳೂರು: ಉಪೇಂದ್ರ ಅಭಿನಯದ ‘ಕಬ್ಜ’ ಶುರುವಾದಾಗಿನಿಂದ ಹಲವು ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಚಿತ್ರದಲ್ಲೇನಿದೆ ಅಥವಾ ಹೇಗೆ ಮೂಡಿ ಬಂದಿದೆ ಎಂಬುದನ್ನು ನಿರ್ದೇಶಕ ಆರ್. ಚಂದ್ರು ಇದುವರೆಗೂ ಬಿಟ್ಟುಕೊಟ್ಟಿರಲಿಲ್ಲ. ಈಗ ಅವರು ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ. ಇದೇ ಸೆ. 18ರಂದು ಉಪೇಂದ್ರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಒಂದು ದಿನ ಮುಂಚೆಯೇ ಟೀಸರ್ ಬಿಡುಗಡೆ ಮಾಡಲು ಚಂದ್ರು ತೀರ್ವನಿಸಿದ್ದಾರೆ. ಅದರಂತೆ ಸೆ. 17ರಂದು ಸಂಜೆ 5 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಟೀಸರ್ ಬಿಡುಗಡೆಯಾಗಲಿದೆ.
‘ಕಬ್ಜ’, ಕನ್ನಡದಿಂದ ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ವರ್ಷಾಂತ್ಯಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಪ್ರಚಾರ ಪ್ರಾರಂಭವಾಗಲಿದ್ದು, ಮೊದಲ ಹಂತವಾಗಿ ಟೀಸರ್ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಲಿದೆ. ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರಿಯಾ ಶರಣ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದು, ರವಿ ಬಸ್ರೂರು ಸಂಗೀತ ಮತ್ತು ಎ.ಜೆ. ಶೆಟ್ಟಿ ಛಾಯಾಗ್ರಹಣವಿದೆ.