

ಬೆಂಗಳೂರು: ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಕಾಲಚಕ್ರ' ಚಿತ್ರದ ವಿಭಿನ್ನ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ತಮ್ಮ ಕಂಚಿನ ಕಂಠ ಹಾಗೂ ಸಹಜ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ವಸಿಷ್ಠ ಸಿಂಹ ಈ ಚಿತ್ರದಲ್ಲಿ 25 ರಿಂದ 60 ವಯೋಮಾನದಲ್ಲಿ ಬರುವ ನಾಲ್ಕು ಪಾತ್ರಗಳ ನಿರ್ವಹಣೆ ಮಾಡಿದ್ದಾರೆ.
ಲಾಕ್ ಡೌನ್ಗೂ ಮುನ್ನ ಕಿಚ್ಚ ಸುದೀಪ ಬಿಡುಗಡೆ ಮಾಡಿದ್ದ ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ಟೀಸರ್ ಮೂಲಕ ಆಗಮಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ದೇಶಕ ಸುಮಂತ್ ಕ್ರಾಂತಿ.
ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳಿಗೆ ಚೇತನ್ ಕುಮಾರ್, ಕವಿರಾಜ್, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಂಚಿತ್ ಹೆಗ್ಡೆ, ಕೈಲಾಶ್ ಖೇರ್, ಪಂಚಮ್ ಧ್ವನಿ ನೀಡಿದ್ದಾರೆ.
ಇದನ್ನೂ ಓದಿ: ಇಂದು ವಿಶ್ವ ಪುತ್ರಿಯರ ದಿನ: ಬಾಳಿನ ಕಣ್ಣು ಹೆಣ್ಣು
ಎಲ್. ಎಂ. ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಎನ್ ಸಿಂಹ, ರಕ್ಷ್, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.