

ಬೆಂಗಳೂರು: ಕನ್ನಡದ ಬಹುಬೇಡಿಕೆಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈಗಾಗಲೇ ಬಾಲಿವುಡ್ ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿರುವುದು ಸುದ್ದಿಯಾಗಿದೆ. ಅಜಯ್ ಕಪೂರ್ ಮತ್ತು ಸುಭಾಷ್ ಕಾಳೆ ನಿರ್ವಿುಸುತ್ತಿರುವ ‘ಗರುಡ್’ ಅಲ್ಲದೆ, ಫರ್ಹಾನ್ ಅಖ್ತರ್ ನಿರ್ವಿುಸುತ್ತಿರುವ ‘ಯುದ್ರ’ ಎಂಬ ಚಿತ್ರಗಳಿಗೆ ಅವರು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇದರ ಜತೆಗೆ ಬೋನಸ್ ಎಂಬಂತೆ ಸಲ್ಮಾನ್ ಖಾನ್ ಅಭಿನಯದ ಚಿತ್ರವೊಂದಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸುವುದಕ್ಕೆ ರವಿಗೆ ಅವಕಾಶ ಸಿಕ್ಕಿದೆ.
ಹೌದು, ಸಲ್ಮಾನ್ ಅಭಿನಯದ ‘ಅಂತಿಮ್ ಚಿತ್ರವು ನವೆಂಬರ್ 26ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ರವಿ ಬಸ್ರೂರು ಅವರದ್ದೇ ಹಿನ್ನೆಲ ಸಂಗೀತ. ಈ ವಿಷಯವನ್ನು ಸ್ವತಃ ರವಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ‘ಭಾರತದ ಭಾಯ್ಜಾನ್ ಚಿತ್ರವೊಂದಕ್ಕೆ ಸಂಗೀತ ಸಂಯೋಜಿಸುತ್ತಿರುವುದು ಬಹಳ ಸಂತೋಷವಾಗುತ್ತಿದೆ. ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ನಿಮಗೆಲ್ಲರಿಗೂ ಖುಷಿಕೊಡಲಿದೆ ಎಂಬ ನಂಬಿಕೆ ಇದೆ’ ಎಂದು ರವಿ ಬರೆದುಕೊಂಡಿದ್ದಾರೆ. ಇದಲ್ಲದೆ ‘ಕೆಜಿಎಫ್ 2’, ‘ಮದಗಜ’, ‘ಕಬ್ಜ’, ‘ಸಲಾರ್’ ಮುಂತಾದ ಹಲವು ಚಿತ್ರಗಳಿಗೆ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ.