

ಬೆಂಗಳೂರು: ‘ಕನ್ನಡದ ಎಷ್ಟೋ ಸಿನಿಮಾಗಳಲ್ಲಿ ಒಳ್ಳೆಯ ಪಾತ್ರ ಎಂದು ಒಪ್ಪಿಕೊಂಡು, ಸಿದ್ಧತೆ ನಡೆಸುತ್ತಿದ್ದೆ. ಆದರೆ, ಕೊನೇ ಘಳಿಗೆಯಲ್ಲಿ ಪಾತ್ರವನ್ನೇ ಬದಲಿಸಿಬಿಡುತ್ತಿದ್ದರು. ಈ ರೀತಿಯ ಅನುಭವ ನನಗೆ ಹಲವು ಬಾರಿ ಆಗಿದ್ದು, ಬೇಸರವಿದೆ. ಈಗೀಗ, ನಾನು ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಕಾರಣಕ್ಕೆ ಐಟಂ ಡಾನ್ಸ್ ಮಾಡುವಿರಾ? ಎಂದು ಕೇಳುತ್ತಾರೆ’ ಎಂದು ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳದಿರುವುದಕ್ಕೆ ನಟಿ ಜ್ಯೋತಿ ರೈ ಅಸಮಾಧಾನ ಹೊರಹಾಕುತ್ತಾರೆ.
ಕನ್ನಡದಲ್ಲಿ ‘ಜೋಗುಳ’, ‘ಗೆಜ್ಜೆಪೂಜೆ’ ಧಾರಾವಾಹಿ ಹಾಗೂ ‘ವರ್ಣಪಟಲ’ ಚಿತ್ರ ಸೇರಿ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಕರಾವಳಿ ಮೂಲದ ಜ್ಯೋತಿ ರೈ ಸದ್ಯ ಟಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ. ಅವರು ಮುಖ್ಯಭೂಮಿಕೆಯಲ್ಲಿರುವ ‘ಕಿಲ್ಲರ್’ ಬಿಡುಗಡೆ ಸಿದ್ಧವಾಗಿದೆ. ಇಲ್ಲಿ ಜ್ಯೋತಿ ಆ್ಯಕ್ಷನ್ ಅವತಾರ ತಾಳಿದ್ದಾರೆ. ‘ಇದೊಂದು ಸೈನ್ಸ್-ಫಿಕ್ಷನ್ ಸಿನಿಮಾ. ನಾನು ಪೂರ್ಣಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಿದು. ಈ ಹಿಂದೆ ನಾನು ನಟಿಸಿದ್ದ ಕನ್ನಡದ ‘ವರ್ಣಪಟಲ’ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂದಿತ್ತು. ಅದು ಕಲಾತ್ಮಕ ಸಿನಿಮಾವಾದರೆ, ಇದು ಆ್ಯಕ್ಷನ್ ಚಿತ್ರ. ಇಲ್ಲಿ ನಾನು ನಾಲ್ಕೈದು ಗೆಟಪ್‌ನಲ್ಲಿದ್ದು, ನಾನು ಹೀಗೂ ಕಾಣಿಸಿಕೊಳ್ಳಬಹುದಾ ಅಂತ ಮೊದಲಿನಿಂದ ನನ್ನನ್ನು ನೋಡಿಕೊಂಡು ಬಂದವರಿಗೆ ಆಚ್ಚರಿಯಾಗಬಹುದು. ಜಿಮ್‌ನಲ್ಲಿ ಬೆವರು ಹರಿಸಿದ್ದೇನೆ. ಸಾಹಸ ದೃಶ್ಯಗಳಿಗೆ ಫೈಟ್ ಕಲಿತಿದ್ದೇನೆ. ಮೊದಲು ತುಂಬಾ ಕಠಿಣ ಅನಿಸಿತು. ಸಾಹಸ ಚಿತ್ರಗಳು ನನಗೆ ಇಷ್ಟವಾಗುವ ಕಾರಣ, ಉತ್ಸಾಹದಿಂದ ಪಾತ್ರ ನಿರ್ವಹಿಸಿದೆ. ಕನ್ನಡ ಮತ್ತು ತೆಲುಗಿನಲ್ಲಿ ನಾನೇ ಡಬ್ ಮಾಡಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.
ಅವಕಾಶ ಸಿಕ್ಕರೆ ಕನ್ನಡಕ್ಕೆ ಬರುವೆ:ತೆಲುಗಿನಲ್ಲಿ ಬಿಜಿ ಇರುವ ಜ್ಯೋತಿ ಕನ್ನಡಕ್ಕೆ ಬರುವ ಬಗ್ಗೆ, ‘ಕಲಾವಿದರಿಗೆ ಯಾವುದೇ ಭಾಷೆಯ ಗಡಿಯಿಲ್ಲ. ಎಲ್ಲ ಭಾಷೆಗಳಲ್ಲಿ ನಟಿಸಲು ಸಿದ್ಧಳಿದ್ದೇನೆ. ಮತ್ತೆ ನನಗೆ ಇಂತಹದ್ದೇ ಪಾತ್ರ ಅಂತೇನಿಲ್ಲ. ಒಳ್ಳೆಯ ಪಾತ್ರಗಳು ದೊರೆತರೆ ಕನ್ನಡದಲ್ಲೂ ನಟಿಸುವೆ. ಆದರೆ, ಈ ಮುಂಚೆ ಕನ್ನಡದಲ್ಲಿ ಒಳ್ಳೆಯ ಕಥೆಗಳು ದೊರೆಯಲಿಲ್ಲ ಎಂಬ ಕೊರಗು ಇದ್ದೇ ಇದೆ. ‘ಕಿಲ್ಲರ್’ ಬಳಿಕ ಕನ್ನಡದಿಂದ ಒಳ್ಳೆಯ ಕಥೆಗಳು ಬರುವ ಆಶಾವಾದದಲ್ಲಿದ್ದೇನೆ’ ಎನ್ನುತ್ತಾರೆ. ಅವರ ಪತಿ ಪೂರ್ವಜ್ ‘ಕಿಲ್ಲರ್’ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದಲ್ಲದೇ ಪೂರ್ವಜ್ ನಿರ್ದೇಶನದ ‘ಮಾಸ್ಟರ್‌ಪೀಸ್’ ಎಂಬ ತೆಲುಗಿನ ಇನ್ನೊಂದು ಚಿತ್ರದಲ್ಲಿ ಜ್ಯೋತಿ ನಟಿಸಿದ್ದು, ಮೇ ತಿಂಗಳಿನಿಂದ ಅದರ ಶೂಟಿಂಗ್ ಆರಂಭವಾಗಲಿದೆ.
ಯೋಚನೆ ಮಾಡುವುದನ್ನು ಬಿಟ್ಟಿದ್ದೇನೆ: ಜಾಲತಾಣದಲ್ಲಿ ತಮ್ಮ ಕುರಿತು ಬರುವ ಟ್ರೋಲ್, ಟೀಕೆಗಳ ಬಗ್ಗೆ ಜ್ಯೋತಿ, ‘ನಮ್ಮ ನಡವಳಿಕೆಗಳು ಕೆಲವರಿಗೆ ಇಷ್ಟವಾಗುತ್ತವೆ, ಕೆಲವರಿಗೆ ಇಲ್ಲ. ಆದರೆ, ನಾವು ಇಷ್ಟವಾಗುವವರ ಪರವಾಗಿ ಇರಬೇಕು. ಟ್ರೋಲ್, ಟೀಕೆ ಮಾಡುವವರ ಬಗ್ಗೆ ನಾನು ಯೋಚಿಸುವುದಿಲ್ಲ. ನನ್ನ ಪ್ರತಿಭೆ ಬಗ್ಗೆ ನನಗೆ ನಂಬಿಕೆ ಇದೆ. ನನ್ನ ಬಗ್ಗೆ ತಿಳಿದವರೂ ನನ್ನನ್ನು ನಂಬುತ್ತಾರೆ. ಅಷ್ಟೇ ಸಾಕು. ಟ್ರೋಲ್, ಟೀಕೆ ಕೇವಲ ಕ್ಷಣಿಕ’ ಎಂದು ನಗುತ್ತಾರೆ ಜ್ಯೋತಿ.