ಸದ್ಯದ ಬಗ್ಗೆಯಷ್ಟೇ ಯೋಚನೆ

devaki feb 18 2020
Published on

ಬೆಂಗಳೂರು: ‘ನಿರೀಕ್ಷೆ ಅಂತೇನೂ ಇಲ್ಲ, ಒಳ್ಳೆಯದಾಗಲಿ ಎಂಬ ಆಶಯವಂತೂ ಇದ್ದೇ ಇದೆ..’ - ಇದು ‘ಪಾಪ್​ಕಾರ್ನ್ ಮಂಕಿ ಟೈಗರ್’ ಸಿನಿಮಾ ಬಗ್ಗೆ ದೇವಕಿಯ ಮಾತು.

‘ಅರೇ.. ಈ ದೇವಕಿ ಯಾರು?’ ಎಂದೆಲ್ಲ ಯೋಚಿಸಬೇಕಾಗಿಲ್ಲ. ಇದು ಈ ಚಿತ್ರದಲ್ಲಿ ದೇವಕಿ ಎಂಬ ಪಾತ್ರ ಮಾಡಿರುವ ನಟಿ ನಿವೇದಿತಾ ಅವರ ಮಾತು. ‘ಸಿನಿಮಾ ಅಂತ ಅಲ್ಲ, ನಿಜಜೀವನದಲ್ಲೂ ಅಷ್ಟೇ. ನಾನು ಹಿಂದೆ ಆಗಿದ್ದರ ಬಗ್ಗೆ, ಮುಂದೆ ಆಗಬಹುದಾದ್ದರ ಕುರಿತೆಲ್ಲ ಯೋಚನೆ ಮಾಡುತ್ತ ಕುಳಿತುಕೊಳ್ಳುವುದಿಲ್ಲ. ಅಂಥ ಯೋಚನೆ ಬಂದರೂ ಕೆಲವೇ ಕ್ಷಣಗಳಲ್ಲಿ ಅದರಿಂದ ಹೊರಗೆ ಬಂದು ಬಿಡುತ್ತೇನೆ. ನಿನ್ನೆ-ನಾಳೆಯ ಬಗ್ಗೆ ಯೋಚಿಸುವ ಬದಲು ನಾನು ಇಂದಿನ ಅದರಲ್ಲೂ ಸದ್ಯದ ಬಗ್ಗೆಯಷ್ಟೇ ಯೋಚಿಸುತ್ತೇನೆ. ಪ್ರತಿಸಲವೂ ಅಷ್ಟೇ, ಜೀವನದಲ್ಲಿ ಏನು ಬರುತ್ತದೋ ಅದನ್ನು ಒಪ್ಪಿಕೊಂಡು ಹೋಗುವುದು ನನ್ನ ಅಭ್ಯಾಸ’ ಎನ್ನುತ್ತ ಸಿನಿಮಾದಲ್ಲಿನ ಪಾತ್ರದ ಕುರಿತು ಹೇಳಿಕೊಂಡರು ನಿವೇದಿತಾ.

ಪಾತ್ರದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ ಎನ್ನುತ್ತಲೇ ಒಂದಷ್ಟು ಮಾಹಿತಿ ಹಂಚಿಕೊಂಡರು ನಿವೇದಿತಾ. ‘ಇಲ್ಲಿ ನನ್ನದು ದೇವಕಿ ಎಂಬ ಪಾತ್ರ. ಅವಳ ಜೀವನದಲ್ಲಿ ಏನೇನು ಘಟನೆಗಳು ಸಂಭವಿಸುತ್ತವೆ, ಅದರಿಂದ ಏನೇನಾಗುತ್ತದೆ ಹಾಗೂ ಅವಳು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದೇ ನನ್ನ ಪಾತ್ರದ ವಿಶೇಷ’ ಎನ್ನುತ್ತಾರೆ ಅವರು. ಇನ್ನು ಈ ಸಿನಿಮಾದಿಂದಾಗಿ ಅವರು ಮೊದಲ ಸಲ ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿನಯಿಸಿದ್ದಾರೆ. ಸೂರಿ ಅವರ ಕಾರ್ಯಶೈಲಿ, ಅದರಿಂದ ತಾವು ಕಲಿತ ಅಂಶಗಳನ್ನೂ ಹಂಚಿಕೊಂಡರು. ‘ಸೂರಿ ಅವರು ಎಷ್ಟೇ ತಯಾರಿ ನಡೆಸಿ ಸ್ಕ್ರಿಪ್ಟ್ ಹಿಡಿದುಕೊಂಡು ಬಂದರೂ ಲೊಕೇಷನ್​ನಲ್ಲಿ ಕೊನೆಯ ಕ್ಷಣದಲ್ಲಿ ಏನಾದರೂ ಹೊಸದು ತೋಚಿದರೆ ಅದನ್ನೇ ಮಾಡಿಸುತ್ತಿದ್ದರು. ಅವರ ಪ್ರತಿ ನರೇಷನ್ ವಿಭಿನ್ನವಾಗಿರುತ್ತಿತ್ತು. ನಾವು ಯಾವುದಕ್ಕೂ ಫಿಕ್ಸ್ ಆಗಲು ಅವರು ಬಿಡುತ್ತಿರಲಿಲ್ಲ. ಹೀಗಾಗಿ ಸ್ಕ್ರಿಪ್ಟ್ ಇದ್ದರೂ ನಾವು ಅದಕ್ಕೆ ಸ್ಟಿಕ್ ಆಗಿರುವಂತಿರಲಿಲ್ಲ. ಅವರ ಕಾರ್ಯವೈಖರಿ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾದರೂ ನನಗೆ ಅದು ಇಷ್ಟವಾಯಿತು’ ಎಂದರು ರೀಲ್ ದೇವಕಿ. ಚಿತ್ರದ ನಾಯಕ ಡಾಲಿ ಧನಂಜಯ ಅವರ ಕುರಿತು ಕೂಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಾವಿಬ್ಬರೂ ಮೈಸೂರಿನವರು, ಇಬ್ಬರೂ ಮರಿಮಲ್ಲಪ್ಪ ಕಾಲೇಜಿನಲ್ಲಿ ಓದಿದ್ದವರೇ. ಒಂದು ಕಾಲದಲ್ಲಿ ಒಂದೇ ಅಪಾರ್ಟ್​ವೆುಂಟ್​ನಲ್ಲಿ ಇದ್ದವರು ಕೂಡ. ಶೂಟಿಂಗ್ ವೇಳೆ ನಾನು ಸ್ವಲ್ಪ ಗಂಭೀರವಾಗಿದ್ದರೂ ಅವರು ಆರಾಮಾಗಿ ಅಭಿನಯಿಸುತ್ತಿದ್ದರು’ ಎನ್ನುತ್ತ ನಿವೇದಿತಾ ಶೂಟಿಂಗ್ ಅನುಭವ ಹಂಚಿಕೊಂಡರು.

ಅಂದಹಾಗೆ ಹೆಚ್ಚೂಕಡಿಮೆ ಮೂರು ವರ್ಷಗಳ ಹಿಂದೆ ತೆರೆ ಕಂಡಿದ್ದ ‘ಶುದ್ಧಿ’ ಸಿನಿಮಾ ಬಳಿಕ ನಿವೇದಿತಾ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳದಿರುವ ಬಗ್ಗೆ ಹೇಳುವುದಿಷ್ಟು. ‘ನಾನು ಸಿನಿಮಾದಿಂದ ಗ್ಯಾಪ್ ತೆಗೆದುಕೊಂಡಿಲ್ಲ, ಹಾಗಂತ ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರಲೂ ಇಲ್ಲ. ನಾನು ಒಂದು ಕೆಲಸ ಮಾಡಿ ಸುಮ್ಮನಾಗಿಬಿಡುತ್ತೇನೆ. ಅದು ಸಿನಿಮಾವಾದರೂ ಅಷ್ಟೇ..’ ಎಂಬುದು ಗ್ಯಾಪ್ ಬಗ್ಗೆ ಅವರ ಸ್ಪಷ್ಟನೆ.

ರವಿಕಾಂತ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net