

ಬೆಂಗಳೂರು: ತಾಯಿ ಅನ್ನೋದಕ್ಕಿಂತ ಫ್ರೆಂಡ್ ಎನ್ನಬಹುದು. ತುಂಬ ಭಯ ಏನೂ ಇಲ್ಲ. ತುಂಬ ಜಗಳ ಮಾಡುತ್ತೀವಿ. ನಂತರ ಒಂದಾಗಿ ಖುಷಿಖುಷಿಯಾಗಿ ನಗುತ್ತಾ ಇರುತ್ತೀವಿ. ನನ್ನ ಕೆರಿಯರ್ನಲ್ಲಿ ಬಹಳ ಮಹತ್ವದ ಪಾತ್ರವನ್ನ ಅವರು ವಹಿಸಿದ್ದಾರೆ. ನನ್ನ ಪರವಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ತುಂಬ ಚಿಕ್ಕವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದೆ. 19 ವರ್ಷದವಳಾಗಿದ್ದಾಗ ಮೊದಲ ಸಿನಿಮಾ ಮಾಡಿದೆ. ನನಗೇನೂ ಗೊತ್ತಿರಲಿಲ್ಲ. ಆರಂಭದ ದಿನಗಳಲ್ಲಿ ಅಮ್ಮ ಯಾವಾಗಲೂ ಜತೆಗೆ ಇರೋರು. ನನಗೆ ಸಿನಿಮಾ ಮಾಡೋದಕ್ಕೂ ಅಷ್ಟು ಆಸಕ್ತಿ ಇರಲಿಲ್ಲ. ನಾನು ಸಿನಿಮಾ ಒಪ್ಪಿದ್ದಿಕ್ಕೆ ಅವರೇ ಕಾರಣ.
ನಿರ್ದೇಶಕ ಮಹೇಶ್ ಬಾಬು ಫೋನ್ ಮಾಡಿದಾಗ, ಅವರೇ ನನ್ನನ್ನು ಒಪ್ಪಿಸಿದ್ದು. ನನ್ನ ವೃತ್ತಿಜೀವನದ ಬೆನ್ನೆಲುಬು ಅಂದರೆ ತಪ್ಪಿಲ್ಲ. ಪ್ರತಿ ಹೆಜ್ಜೆಯಲ್ಲೂ ಅವರು ನನ್ನ ಜತೆಗಿದ್ದಾರೆ. ನನಗೆ ಮ್ಯಾನೇಜರ್ ಇಲ್ಲ. ಅಮ್ಮನೇ ನನ್ನ ಮ್ಯಾನೇಜರ್ ತರಹ ಎಲ್ಲಾ ಕೆಲಸ ನೋಡಿಕೊಂಡಿದ್ದಾರೆ. ಯಾವುದೇ ಹಿನ್ನೆಲೆ ಮತ್ತು ಸಪೋರ್ಟ್ ಇಲ್ಲದೆ ಚಿತ್ರರಂಗಕ್ಕೆ ಬಂದ ನನ್ನಂಥವಳಿಗೆ ಭಯ ಇರುತ್ತದೆ. ಆಗ ಅಮ್ಮನೇ ನನ್ನ ಸಪೋರ್ಟ್ ಆಗಿದ್ದಾರೆ. ಅವರಿಗೆ ಬರೀ ಥ್ಯಾಂಕ್ಸ್ ಹೇಳಿದರೆ ಸಾಲದು.
| ಆಶಿಕಾ ರಂಗನಾಥ್