

ಬೆಂಗಳೂರು: ಕನ್ನಡದಲ್ಲಿ ನಿರ್ದೇಶಕಿಯರ ಪರಂಪರೆಯೇ ಇದೆ. ಈ ಹಿಂದೆ ಕವಿತಾ ಲಂಕೇಶ್, ಸುಮನಾ ಕಿತ್ತೂರ್ ಹಾಗೂ ರೂಪಾ ಅಯ್ಯರ್ ಸೇರಿ ಹಲವರು ಸದಭಿರುಚಿಯ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಬ್ಬ ನಿರ್ದೇಶಕಿ ಸೇರ್ಪಡೆಯಾಗಿದ್ದಾರೆ. ಅವರೇ ಸಿ.ಆರ್.ಬಾಬಿ. ‘ಜಸ್ಟ್ ಮ್ಯಾರಿಡ್’ ಚಿತ್ರದ ಮೂಲಕ ಬಾಬಿ ಡೈರಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. ಇದು ಕೌಟುಂಬಿಕ ಮೌಲ್ಯಗಳನ್ನು ಪ್ರಚುರಪಡಿಸುವ ರೊಮ್ಯಾಂಟಿಕ್ ಸಿನಿಮಾವಾಗಿದ್ದು, ‘ಬಿಗ್‌ಬಾಸ್ ಕನ್ನಡ ಸೀಸನ್-7’ ವಿಜೇತ ಶೈನ್ ಶೆಟ್ಟಿ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಖ್ಯಾತಿಯ ಅಂಕಿತಾ ಅಮರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಟೀಸರ್ ಹಾಗೂ ‘ಅಭಿಮಾನಿಯಾಗಿ ಹೋದೆ’ ಎಂಬ ಸಾಂಗ್‌ನಿಂದ ಗಮನಸೆಳೆದಿರುವ ಚಿತ್ರ ಸಂಕ್ರಾಂತಿ ಹಬ್ಬಕ್ಕೆ ‘ಪಾರ್ಟಿ ಸಾಂಗ್’ ಬಿಡುಗಡೆಗೊಳಿಸಿದೆ.
ನಟ ಸುದೀಪ್, ‘ಕೇಳೋ ಮಚ್ಚಾ’ ಎಂಬ ಪಾರ್ಟಿ ಸಾಂಗ್ ಬಿಡುಗಡೆಗೊಳಿಸಿ, ಶುಭ ಹಾರೈಸಿದ್ದಾರೆ. ‘ನಮಗೆಲ್ಲಾ ಇಷ್ಟವಾಗೋ ಟಿ ಯಾವುದು ಹೇಳೋ ಮಚ್ಚಾ...’ ಎಂದು ಸಾಗುವ ಟಪ್ಪಾಂಗುಚ್ಚಿ ಗೀತೆಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ನಕಾಶ್ ಅಜಿೀಜ್ ಧ್ವನಿಯಾಗಿದ್ದಾರೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ರಚಿಸಿದ್ದಾರೆ. ಹಾಡಿನಲ್ಲಿ ಶೈನ್ ಶೆಟ್ಟಿ ಮತ್ತು ಶ್ರೀವತ್ಸ ಗೆಳೆಯರ ಜತೆ ಕುಣಿದು ಕುಪ್ಪಳಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಶ್ರುತಿ ಹರಿಹರನ್, ದೇವರಾಜ್, ಶ್ರುತಿ, ಅನೂಪ್ ಭಂಡಾರಿ, ಅಚ್ಯುತ್‌ಕುಮಾರ್ ತಾರಾಗಣದಲ್ಲಿದ್ದಾರೆ.