ಚಿತ್ರರಂಗದಲ್ಲಿ ಸಾಲು ಸಾಲು ಲೈಂಗಿಕ ದೌರ್ಜನ್ಯ ಆರೋಪ: ಮಾಜಿ ಕ್ರಿಕೆಟಿಗ ಶ್ರೀಶಾಂತ್ ಪ್ರತಿಕ್ರಿಯೆ ವೈರಲ್​

Sreesanth
Published on

ಕೊಚ್ಚಿ: ಕೇರಳದಲ್ಲಿ ಭಾರಿ ಸದ್ದು ಮಾಡುತ್ತಿರುವ ಹೇಮಾ ಸಮಿತಿ ವರದಿಯ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಗಳನ್ನು ಮಾಡುವ ಮೂಲಕ ಒಬ್ಬ ವ್ಯಕ್ತಿಯನ್ನು ಶಿಲುಬೆಗೇರಿಸುವುದು ತುಂಬಾ ಸುಲಭ ಎಂದಿರುವ ಶ್ರೀಶಾಂತ್​, ತಪ್ಪು ಮಾಡಿರುವುದು ಸಾಬೀತಾಗುವವರೆಗೂ ಇಂತಹ ಆರೋಪಗಳನ್ನು ನಾನು ಬೆಂಬಲಿಸುವುದಿಲ್ಲ ಎಂದು ಖಡಕ್​ ಆಗಿ ಹೇಳಿದ್ದಾರೆ.

ಹೇಮಾ ಸಮತಿ ವರದಿ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ ಶ್ರೀಶಾಂತ್​, ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು. ಆದರೆ, ನಿಮ್ಮ ಮೇಲೆ ತಪ್ಪು ಆರೋಪ ಬಂದರೆ ಕೊಂಚ ತಾಳ್ಮೆಯಿಂದಿರಿ. ಈ ಆರೋಪಗಳು ಕೇವಲ ಒಂದು ಕುಟುಂಬದ ಮೇಲೆ ಪರಿಣಾಮ ಬೀರುವುದಿಲ್ಲ. ಆರೋಪಗಳಿಂದ ಯಾರನ್ನೂ ಸುಮ್ಮನೇ ಶಿಲುಬೆಗೇರಿಸಬೇಡಿ. ಕ್ರಿಕೆಟ್​ನಲ್ಲಿ ನನ್ನ ಮೇಲೆ ಕೇಳಿಬಂದ ಆರೋಪಗಳಿಂದ ಚೇತರಿಸಿಕೊಳ್ಳಲು ಎರಡೂವರೆ ವರ್ಷ ಬೇಕಾಯಿತು ಎಂದು ತಮ್ಮ ವಿರುದ್ಧದ ಬೆಟ್ಟಿಂಗ್ ಆರೋಪಗಳನ್ನು ಉಲ್ಲೇಖಿಸಿ ಶ್ರೀಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೆ ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ನಟಿಯರು ಸೇರಿದಂತೆ ಹಲವರು ಲೈಂಗಿಕ ದೌರ್ಜನ್ಯದ ದೂರುಗಳನ್ನು ಸಲ್ಲಿಸಿದ್ದಾರೆ. ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ನಿರ್ದೇಶಕ ರಂಜಿತ್ ಅವರು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಟಿ ರೇವತಿ ಸಂಪತ್ ಆರೋಪದ ಹಿನ್ನೆಲೆಯಲ್ಲಿ ನಟ ಸಿದ್ದಿಕ್ ಕಲಾವಿದರ ಸಂಸ್ಥೆ ಎಎಂಎಂಎ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿದ್ದಿಕ್ ಅಲ್ಲದೆ ನಟ ರಿಯಾಜ್ ಖಾನ್ ವಿರುದ್ಧವೂ ರೇವತಿ, ಗಂಭೀರ ಆರೋಪ ಮಾಡಿದ್ದಾರೆ. ರಿಯಾಜ್ ಖಾನ್ ತನಗೆ ಫೋನ್​ ಮಾಡಿ ಅಸಭ್ಯವಾಗಿ ಮಾತನಾಡಿದ್ದಾರೆ. ಕಾಮತೃಷೆ ಈಡೇರಿಸುವ ಯಾರಾದರೂ ಸ್ನೇಹಿತೆಯರಿದ್ದರೆ ತಿಳಿಸಲು ಕೇಳಿಕೊಂಡರು ಎಂದು ನಟಿ ಆರೋಪಿಸಿದ್ದಾರೆ.

ನಟರಾದ ಜಯಸೂರ್ಯ, ಎಡಿವೆಲಾ ಬಾಬು, ಮಣಿಯನ್​ಪಿಳ್ಳ ರಾಜು ಮತ್ತು ಮುಕೇಶ್ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ನಟಿ ಮಿನು ಮುನೀರ್ ಆರೋಪಿಸಿದ್ದಾರೆ. ನಟಿಯ ಪ್ರಕಾರ ಬಾಬು, ಕಲಾವಿದರ ಸಂಘದ ಸದಸ್ಯತ್ವ ನೀಡುವುದಾಗಿ ಹೇಳಿ ತನ್ನ ಫ್ಲಾಟ್‌ಗೆ ಕರೆದು ಅನುಚಿತವಾಗಿ ವರ್ತಿಸಿದರು ಎಂದು ದೂರಿದರೆ, ಜಯಸೂರ್ಯ ಹಿಂದೆ ಬಂದು ತನ್ನನ್ನು ತಬ್ಬಿ ಮುತ್ತಿಟ್ಟರು ಎಂದು ಆರೋಪಿಸಿದ್ದಾರೆ. ಹೀಗೆ ಸಾಕಷ್ಟು ನಟಿಯರು ಮಾಧ್ಯಮಗಳ ಮುಂದೆ ಬಂದು ನಟರ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net