ಮತ್ತೆ ಬಂತು ನಾಗರಹಾವು; ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶನದಲ್ಲಿ ಮುಂದುವರಿದ ಕಥೆ

zscasc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಪುಟ್ಟಣ್ಣ ಕಣಗಾಲ್​ ನಿರ್ದೇಶನದಲ್ಲಿ ಡಾ. ವಿಷ್ಣುವರ್ಧನ್​ ಮತ್ತು ಡಾ. ಅಂಬರೀಷ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ "ನಾಗರಹಾವು' 1972ರಲ್ಲಿ ರಿಲೀಸ್​ ಆಗಿತ್ತು. ಆ ಬಳಿಕ 2002ರಲ್ಲಿ "ಉಪೇಂದ್ರ' ಮತ್ತು 2016ರಲ್ಲಿ ರಮ್ಯಾ ಮತ್ತು ದಿಗಂತ್​ ಕೂಡ "ನಾಗರಹಾವು' ಎಂಬ ಚಿತ್ರಗಳಲ್ಲಿ ನಟಿಸಿದ್ದರು. ಇನ್ನು "ರಾಮಾಚಾರಿ' ಪಾತ್ರದ ಹೆಸರಿನಲ್ಲೂ 1991ರಲ್ಲಿ ರವಿಚಂದ್ರನ್​ ಒಂದು ಚಿತ್ರದಲ್ಲಿ ನಟಿಸಿದ್ದರೆ, 2014ರಲ್ಲಿ ತೆರೆಗೆ ಬಂದ "ಮಿ. ಆ್ಯಂಡ್​ ಮಿಸಸ್​ ರಾಮಾಚಾರಿ'ಯಲ್ಲಿ ಯಶ್​ ಮತ್ತು ರಾಧಿಕಾ ಪಂಡಿತ್​ ಮಿಂಚಿದ್ದರು. ಇದೀಗ 53 ವರ್ಷಗಳ ಬಳಿಕ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ "ಚಾಮಯ್ಯ ಸನ್​ ಆಫ್ ರಾಮಾಚಾರಿ' ಮೂಲಕ 1972ರ ಕಥೆಯನ್ನು ಮುಂದುವರಿಸಿದ್ದಾರೆ.

ಈಗಾಗಲೇ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೆ ಟ್ರೇಲರ್​ ರಿಲೀಸ್​ ಮಾಡುವ ಮೂಲಕ ಚಿತ್ರತಂಡ ಪ್ರಚಾರದ ಕೆಲಸ ಪ್ರಾರಂಭಿಸಿದೆ. ನಿರ್ದೇಶಕ ಪಲ್ಲಕ್ಕಿ, ""ಈ ಬಂಧನ' ಚಿತ್ರೀಕರಣದ ವೇಳೆ ವಿಷ್ಣು ಸರ್​ನ ಭೇಟಿಯಾಗಿ, ಸಣ್ಣ ಎಳೆ ಹೇಳಿದ್ದೆ. ಅವರೂ ಇಷ್ಟಪಟ್ಟಿದ್ದರು. ಅವರು ಕಾಲವಾದ ಬಳಿಕ ಈ ಸಿನಿಮಾ ಮಾಡುವುದು ಬೇಡ ಅಂತ ಸುಮ್ಮನಿದ್ದೆ. ಒಮ್ಮೆ ಉತ್ತರ ಕರ್ನಾಟಕದಲ್ಲಿ ನಾಟಕ ನೋಡುವಾಗ ಹಿರಿಯ ಕಲಾವಿದ ಜಯ ಶ್ರೀರಾಜ್​ ನಟನೆ ನೋಡಿ ಈ ಸಿನಿಮಾ ಮಾಡಲು ನಿರ್ಧರಿಸಿದೆ' ಎಂದು ಮಾಹಿತಿ ನೀಡುತ್ತಾರೆ.

ಇದು ರಾಮಾಚಾರಿ ಮಗ ಚಾಮಯ್ಯನ ಕಥೆ

ಮೂಲ ಸಿನಿಮಾದ ಕ್ಲೆಮ್ಯಾಕ್ಸ್​ನಲ್ಲಿ ರಾಮಾಚಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ, ಈ ಸಿನಿಮಾದಲ್ಲಿ ಆತ ಬದುಕುಳಿದು ಊರಿಗೆ ವಾಪಸ್ಸಾಗುತ್ತಾನೆ. ಊರಿನಲ್ಲಿ ಆತನಿಗೆ ಛೀಮಾರಿ ಹಾಕುತ್ತಾರೆ. ನಂತರ ಕಂಪನಿ ನಾಟಕಕ್ಕೆ ಸೇರುವ ಆತನಿಗೆ ಅಲ್ಲಿ ಹುಡುಗಿಯೊಂದಿಗೆ ಪ್ರೀತಿ ಹುಟ್ಟಿ, ಮದುವೆಯಾಗುತ್ತಾನೆ. ಅವರಿಗೆ ಹುಟ್ಟುವ ಮಗುವಿಗೆ ಚಾಮಯ್ಯ ಎಂದು ನಾಮಕರಣ ಮಾಡುತ್ತಾರೆ. ಆತನ ಜೀವನದಲ್ಲಿ ನಡೆಯುವ ಟನೆಗಳೇ "ಚಾಮಯ್ಯ ಸನ್​ ಆ್​ ರಾಮಾಚಾರಿ'. ರಾಮಾಚಾರಿ ಮಾತ್ರವಲ್ಲದೇ ಜಲೀಲನ ಮಗ ಛೋಟಾ ಜಲೀಲ್​ ಪಾತ್ರವೂ ಚಿತ್ರದಲ್ಲಿದೆ. ಪ್ರದಿಪ್​ ಶಾಸ್ತ್ರಿ, ಚೈತ್ರಾ, ಪ್ರಕಾಶ್​ ಅರಸು, ಪ್ರೇಮಾ ಗೌಡ, ವಿನುತ ತಾರಾಗಣದಲ್ಲಿದ್ದಾರೆ. ಏಪ್ರಿಲ್​ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net