ಜೂ.6ಕ್ಕೆ ಮಾದೇವ: ವಿನೋದ್ ಪ್ರಭಾಕರ್, ಸೋನಲ್ ಮೊಂಟೇರೊ ಅಭಿನಯದ ಸಿನಿಮಾ

madeva
Published on

ಬೆಂಗಳೂರು: ‘ರಾಬರ್ಟ್’ ಬಳಿಕ ನಟ ವಿನೋದ್ ಪ್ರಭಾಕರ್ ಹಾಗೂ ನಟಿ ಸೋನಲ್ ಮೊಂಟೇರೊ ಮತ್ತೆ ಒಂದಾಗಿದ್ದಾರೆ. ಈ ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ‘ಮಾದೇವ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದ್ದು, ಇದೇ ಜೂ. 6ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 1980ರ ಕಾಲಘಟ್ಟದ ಈ ಕಥೆಗೆ ‘ಖಾಕಿ’ ಖ್ಯಾತಿಯ ನವೀನ್ ರೆಡ್ಡಿ ಬಿ. ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನವೀನ್‌ಕುಮಾರ್, ‘ಇದು 1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರದ ಸಿನಿಮಾ. ಇಲ್ಲಿ ವಿನೋದ್ ಪ್ರಭಾಕರ್ ‘ಹ್ಯಾಂಗ್‌ಮ್ಯಾನ್’ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಆ ಕಾಲಘಟ್ಟಕ್ಕೆ ಸರಿಹೊಂದುವ ಸ್ಥಳಗಳಲ್ಲಿ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ. ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಅತಿಥಿ ಪಾತ್ರದಲ್ಲಿ ಮಾಲಾಶ್ರೀ ನಟಿಸಿದ್ದಾರೆ’ ಎಂದು ಮಾಹಿತಿ ನೀಡಿದರು. ವಿನೋದ್ ಪ್ರಭಾಕರ್, ‘ಕರೊನಾ ಸಮಯದಲ್ಲಿ ನಿರ್ದೇಶಕರು ನನಗೆ ಈ ಕಥೆ ಹೇಳಿದ್ದರು. ಇದು 80ರ ದಶಕದ ಕಥೆ. ನಾನು ಈ ಚಿತ್ರದಲ್ಲಿ ಅಭಿನಯಿಸುವಾಗ ತಂದೆ ಅವರ ‘ಜಿದ್ದು’, ‘ಕರುಳಿನ ಕೂಗು’ ಚಿತ್ರಗಳು ನೆನಪಾದವು’ ಎಂದರು. ಸೋನಲ್, ‘ನನ್ನ ಪಾತ್ರದ ಹೆಸರು ಪಾರ್ವತಿ. ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಪಾತ್ರದ ಬಗ್ಗೆ ಖುಷಿಹಂಚಿಕೊಂಡರು. ಇನ್ನು ಉಳಿದಂತೆ, ಶ್ರುತಿ, ಅಚ್ಯುತಕುಮಾರ್, ಕಾಕ್ರೋಚ್ ಸುಧೀ, ಬಲ ರಾಜವಾಡಿ ಕಲಾ ಬಳಗದಲ್ಲಿದ್ದಾರೆ. ಬಾಲಕೃಷ್ಣ ತೋಟ ಛಾಯಾಗ್ರಹಣ, ವಿಜಯ್ ಎಂ.ಕುಮಾರ್ ಸಂಕಲನ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net