

ಬೆಂಗಳೂರು: ಬೃಂದಾ ಆಚಾರ್ಯ ಅಭಿನಯದ 'ಜೂಲಿಯಟ್ 2' ಚಿತ್ರವು ಫೆ. 24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಸಾಮಾ್ಯವಾಗಿ ಜೂಲಿಯಟ್ ಎಂಬ ಹೆಸರು ಕೇಳಿದರೆ, ಇದೊಂದು ರೊಮ್ಯಾಂಟಕ್ ಚಿತ್ರ ಎಂದನಿಸಬಹುದು. ಆದರೆ, ಇದು ಲವ್ ಸ್ಟೋರಿ ಅಲ್ಲ. ಇಲ್ಲಿ ರೋಮಿಯೋ ಇರುವುದಿಲ್ಲ.
ಹಾಗಾದರೆ, ಈ ಚಿತ್ರದ ಕಥೆ ಏನು ಎಂಬ ಪ್ರಶ್ನೆ ಬರಬಹುದು. 'ಜೂಲಿಯೆಟ್ 2' ಒಂದು ಮಹಿಳಾ ಪ್ರಧಾನ ಚಿತ್ರವಂತೆ. ತೊಂದರೆಗೆ ಸಿಲುಕಿದ ಹೆಣ್ಣುಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ? ಎಂಬ ಕಥೆ ಇರುವ ಈ ಚಿತ್ರವನ್ನು ವಿರಾಟ್ ಬಿ. ಗೌಡ ನಿರ್ದೇಶನ ಮಾಡಿದ್ದಾರೆ.
ಬೃಂದಾ ಆಚಾರ್ಯ ಇದಕ್ಕೂ ಮುನ್ನ ಪ್ರೇಮ್ ಅಭಿನಯದ 'ಪ್ರೇಮಂ ಪೂಜ್ಯಂ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. 'ಜೂಲಿಯಟ್ 2', ಬೃಂದಾ ಅಬಿನಯದ ಎರಡನೇ ಚಿತ್ರ. 'ಈ ಚಿತ್ರದಲ್ಲಿ ನನ್ನದು ಜೂಲಿಯಟ್ ಪಾತ್ರ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಮಹಿಳೆ ಅಬಲೆಯಲ್ಲ, ಸಬಲೆ ಎಂದು ನಿರ್ದೇಶಕರು ಹೇಳಹೊರಟ್ಟಿದ್ದಾರೆ. ಕಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವ ಮರೆಯಲು ಅಸಾಧ್ಯ. ಎಲ್ಲರೂ ಬೆವರು ಸುರಿಸಿ ಚಿತ್ರ ಮಾಡಿದ್ದೇವೆ ಎನ್ನುತ್ತಾರೆ. ನಾವು ರಕ್ತ ಸುರಿಸಿ ಸಿನಿಮಾ ಮಾಡಿದ್ದೇವೆ ಎನ್ನಬಹುದು. ಏಕೆಂದರೆ, ಕಾಡಿನಲ್ಲಿ ಜಿಗಣೆಗಳು ಅಷ್ಟು ಕಾಟ ಕೊಟ್ಟಿದೆ' ಎಂದು ಬೃಂದಾ ಆಚಾರ್ಯ ಹೇಳುತ್ತಾರೆ.
ಲಿಖಿತ್ ಆರ್ ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ ಸಾಂತೋ ವಿ ಆಂತೋ ಛಾಯಾಗ್ರಹಣವಿದೆ. ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.