

ಬೆಂಗಳೂರು: ‘ಜೋಗಿ’ ಪ್ರೇಮ್ ತಮ್ಮ ಹೊಸ ಚಿತ್ರಕ್ಕೆ ಏನೆಂದು ಹೆಸರಿಡಬಹುದು? ಧ್ರುವ ಸರ್ಜಾ ಅಭಿನಯದ ಈ ಚಿತ್ರವನ್ನು ಯಾವಾಗ ಪ್ರಾರಂಭಿಸಬಹುದು ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರೆ, ಈಗ ಮೂರನೆಯ ಸುದ್ದಿಯೊಂದನ್ನು ಕೊಟ್ಟಿದ್ದಾರೆ ಪ್ರೇಮ್ ‘ಡಿಕೆ’ ನಂತರ ಅಭಿನಯದಿಂದ ದೂರವೇ ಉಳಿದಿದ್ದ ಅವರು, ಈಗ ಹೊಸ ಚಿತ್ರವೊಂದಕ್ಕೆ ಹೀರೋ ಆಗುವುದಕ್ಕೆ ತಯಾರಿ ನಡೆಸಿದ್ದಾರೆ. ಈ ಚಿತ್ರವು ಪ್ರೇಮ್ ಹುಟ್ಟುಹಬ್ಬದಂದು (ಅ. 22) ಅಧಿಕೃತವಾಗಿ ಘೋಷಣೆಯಾಗಲಿದ್ದು, ಅಂದು ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗುವ ಸಾಧ್ಯತೆ ಇದೆ.
ಅಂದಹಾಗೆ, ಪ್ರೇಮ್ ಅವರನ್ನು ಮತ್ತೊಮ್ಮೆ ಹೀರೋ ಮಾಡುತ್ತಿರುವವರು ಎಂ. ಶಶಿಧರ್. ‘ಘಾರ್ಗಾ’ ಎಂಬ ಚಿತ್ರವನ್ನು ನಿರ್ದೇಶಿಸಿರುವ ಶಶಿಧರ್ಗೆ ಇದು ಎರಡನೆಯ ಚಿತ್ರ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಕನ್ನಡದ ಮೊದಲ ಜಾಂಬಿ (ಮಾಟ-ಮಂತ್ರಗಳಿಂದ ಜೀವಂತಗೊಳಿಸಲಾದ ಶವ) ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪ್ರೇಮ್ ಅವರನ್ನು ಈ ಹಿಂದೆ ಯಾರೂ ತೋರಿಸದ ರೀತಿಯಲ್ಲಿ ವಿಭಿನ್ನ ಗೆಟಪ್ ಮತ್ತು ಲುಕ್ನಲ್ಲಿ ತೋರಿಸುವುದಕ್ಕೆ ಶಶಿಧರ್ ಹೊರಟಿದ್ದಾರಂತೆ.
ಇದೊಂದು ಪ್ಯಾನ್ ಇಂಡಿಯಾ ಮಟ್ಟದ ಚಿತ್ರವಾಗಿದ್ದು, ಬೇರೆ ಭಾಷೆಗಳ ದೊಡ್ಡ ಕಲಾವಿದರು ನಟಿಸುವ ಸಾಧ್ಯತೆ ಇದೆ. ಪ್ರೇಮ್ ಈ ಚಿತ್ರಕ್ಕೆ ಹೀರೋ ಮಾತ್ರವಷ್ಟೇ ಅಲ್ಲ, ನಿರ್ವಪಕರು ಸಹ. ಎ2 ಮ್ಯೂಸಿಕ್ ಮತ್ತು ಪ್ರೇಮ್್ಸ ಡ್ರೀಮ್್ಸ ಜತೆಯಾಗಿ ಈ ಚಿತ್ರವನ್ನು ನಿರ್ವಿುಸಲಿದೆ.ಎಲ್ಲಾ ಸರಿ, ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿರುವ ಪ್ರೇಮ್ ಈ ಚಿತ್ರವನ್ನು ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆ ಸಹಜ. ಧ್ರುವ ಸರ್ಜಾ ಸದ್ಯ ‘ಮಾರ್ಟಿನ್’ನಲ್ಲಿ ತೊಡಗಿಸಿಕೊಂಡಿರುವುದರಿಂದ ಅದನ್ನು ಮುಗಿಸಿ ಬರುವುದಕ್ಕೆ ಇನ್ನಷ್ಟು ದಿನಗಳಾಗುತ್ತವೆ. ಅಷ್ಟರಲ್ಲಿ ಈ ಚಿತ್ರದಲ್ಲಿ ನಟಿಸುವುದು ಪ್ರೇಮ್ ಐಡಿಯಾ. ಈ ಚಿತ್ರ ಮುಗಿಸಿ, ಮುಂದಿನ ವರ್ಷ ಧ್ರುವ ಸರ್ಜಾ ಅಭಿನಯದ ಚಿತ್ರವನ್ನು ಪ್ರೇಮ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.