

72 ಕೇಂದ್ರಗಳಲ್ಲಿ 25 ದಿನ
63 ಕೇಂದ್ರಗಳಲ್ಲಿ 50 ದಿನ
54 ಕೇಂದ್ರಗಳಲ್ಲಿ 75 ದಿನ
45 ಕೇಂದ್ರಗಳಲ್ಲಿ 100 ದಿನ
4 ಕೇಂದ್ರಗಳಲ್ಲಿ 25 ವಾರ
ಬಹುಶಃ ಶಿವರಾಜಕುಮಾರ್ ಅಭಿನಯದ 'ಜೋಗಿ' ಚಿತ್ರವೇ ಕೊನೆ. ಆ ನಂತರ ಕನ್ನಡ ಚಿತ್ರರಂಗದಲ್ಲಿ ಯಾವ ಚಿತ್ರವೂ ಅಷ್ಟೊಂದು ಕೇಂದ್ರಗಳಲ್ಲಿ ಅಷ್ಟೊಂದು ದಿನಗಳು ಓಡಿದ ಉದಾಹರಣೆಗಳು ಸಿಗುವುದಿಲ್ಲ. ಆ ಮಟ್ಟಿಗೆ ಪ್ರೇಮ್ ನಿರ್ದೇಶನದ 'ಜೋಗಿ' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿದೆ.
ಈಗ್ಯಾಕೆ 'ಜೋಗಿ' ಚಿತ್ರದ ವಿಷಯವೆಂದರೆ, ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 15 ವಷರ್ಗಳಾಗಿವೆ. ಸರಿಯಾಗಿ 15 ವರ್ಷಗಳ ಹಿಂದೆ ಅಂದರೆ, 2005ರ ಆಗಸ್ಟ್ 19ರಂದು 'ಜೋಗಿ', ಬೆಂಗಳೂರಿನ ಕಪಾಲಿ ಸೇರಿದಂತೆ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ವಿಶೇಷವೆಂದರೆ, ಅಂದು ವರಮಹಾಲಕ್ಷ್ಮೀ ಹಬ್ಬದ ದಿನ. ಈ ದಿನ, ಕನ್ನಡ ಚಿತ್ರಗಳಿಗೆ ಲಕ್ಕಿ ಎಂಬ ಮಾತಿದೆ. ಅದಕ್ಕೆ ಸರಿಯಾಗಿ, 'ಜೋಗಿ' ಚಿತ್ರವು ಅದೇ ದಿನ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಎಂದನಿಸಿಕೊಂಡಿತ್ತು.
'ಜೋಗಿ' ಚಿತ್ರ ಬಿಡುಗಡೆಯಾಗಿ 15 ವರ್ಷಗಳಾದ ಖುಷಿಯಲ್ಲಿ, ಶಿವರಾಜಕುಮಾರ್ ಅವರ ಅಭಿಮಾನಿಗಳು ಇಂದು ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾದ ಕಾಮನ್ ಡಿಸ್ಪ್ಲೇ ಪಿಕ್ಚರ್ (ಸಿಡಿಪಿ) ಬಿಡುಗಡೆ ಮಾಡಿಸಿದ್ದಾರೆ. ವಿಶೇಷವೆಂದರ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಈ ಸಿಡಿಪಿಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಇದಲ್ಲದೆ ಶಿವಸೈನ್ಯ ಎಂಬ ಶಿವರಾಜಕುಮಾರ್ ಅವರ ಅಭಿಮಾನಿಗಳ ಸಂಘವು, ಯೂಟ್ಯೂಬ್ನ ಎ2 ಚಾನಲ್ನಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಬುಧವಾರ ಬೆಳಿಗ್ಗೆ ಈ ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೇ ಟ್ರೆಂಡಿಂಗ್ನಲ್ಲಿದೆ ಎನ್ನುವುದು ವಿಶೇಷ.