

ಮುಂಬೈ: ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಮುದ್ದಿನ ಮಗಳು ಜಾಹ್ನವಿ ಕಪೂರ್ 'ಡಢಕ್' ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟು, ಆ ನಂತರ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈಗ ಜಾಹ್ನವಿ ತಂಗಿ ಖುಷಿ ಕಪೂರ್ ಸಹ ಬಣ್ಣ ಹಚ್ಚುವುದಕ್ಕೆ ತಯಾರಿ ನಡೆಸಿದ್ದಾರೆ.
ಹೌದು, ಜಾಹ್ನವಿ ತಂಗಿ ಖುಷಿ ಕಪೂರ್ ಸಹ ಬಾಲಿವುಡ್ಗೆ ಸದ್ಯದಲ್ಲೇ ಎಂಟ್ರಿ ಕೊಡಲಿದ್ದಾರಂತೆ. ಹಾಗಂತ ಅವರ ತಂದೆ ಮತ್ತು ಜನಪ್ರಿಯ ನಿರ್ಮಾಪಕ ಬೋನಿ ಕಪೂರ್ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಖುಷಿಗೂ ನಟಿಸುವ ಆಸಕ್ತಿ ಇದೆ. ಸದ್ಯದಲ್ಲೇ ಆಕೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾಳೆ. ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಹೊರಬೀಳಲಿದೆ' ಎಂದು ಹೇಳಿಕೊಂಡಿದ್ದಾರೆ.
ಸ್ವತಃ ತಾವೇ ಜನಪ್ರಿಯ ನಿರ್ಮಾಪಕರಾಗಿದ್ದರೂ, ಮಗಳನ್ನು ಪರಿಚಯಿಸುತ್ತಿಲ್ಲ, ಆ ಕೆಲಸವನ್ನು ಬೇರೊಬ್ಬ ನಿರ್ಮಾಪಕರು ಮಾಡಲಿದ್ದಾರೆ ಎಂದು ಬೋನಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ಖುಷಿಯನ್ನು ನಾನೇ ಚಿತ್ರರಂಗಕ್ಕೆ ಪರಿಚಯಿಸಬಹುದು. ಆದರೆ, ನನ್ನ ಸ್ನೇಹಿತರೊಬ್ಬರು ಖುಷಿಯನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಉತ್ಸುಕರಾಗಿದ್ದಾರೆ' ಎಂದು ಹೇಳಿದ್ದಾರೆ.
ಈ ಹಿಂದೆ ಜಾಹ್ನವಿಯನ್ನು ಕರಣ್ ಜೋಹರ್ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಈಗ ಖುಷಿಯನ್ನು ಯಾರು ಪರಿಚಯಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.