

‘ಅಗ್ನಿ ಶ್ರೀಧರ್ ಅವರ ‘ಆ ದಿನಗಳು’ ಸಿನಿಮಾ ನೋಡಿದಾಗಿನಿಂದ ನಾನು ಅದೇ ರೀತಿಯ ಚಿತ್ರ ಮಾಡಬೇಕು ಎಂದುಕೊಂಡಿದ್ದೆ, ಈಗ ಜಯರಾಜ್ ಕಥೆಯನ್ನು ನಿರ್ದೇಶನ ಮಾಡುವ ಅವಕಾಶ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು ನಿರ್ದೇಶಕ ಶೂನ್ಯ.
70-80ರ ದಶಕದಲ್ಲಿ ಬೆಂಗಳೂರು ಭೂಗತ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದ ಜಯರಾಜ್ ಬದುಕು ಈಗ ಸಿನಿಮಾ ಆಗುತ್ತಿದ್ದು, ಅದರಲ್ಲಿ ಧನಂಜಯ ನಟಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಕಥೆಯ ಈ ಚಿತ್ರಕ್ಕೆ ಅಶು ಬೆದ್ರ ನಿರ್ಮಾಪಕರು. ಚಿತ್ರದ ಘೋಷಣೆ ಕುರಿತ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಶೂನ್ಯ ಮೇಲಿನ ಮಾತುಗಳನ್ನಾಡಿದರು. ‘ಶ್ರೀಧರ್ ಅವರ ಬಳಿ ಇನ್ನೂ 10 ವರ್ಷಕ್ಕೆ ಆಗುವಷ್ಟು ಸಿನಿಮಾ ಕಂಟೆಂಟ್ ಇದೆ. ಅವರು ಚಿತ್ರರಂಗದಲ್ಲಿ ಇರಬೇಕು ಎಂದು ನಾವೆಲ್ಲರೂ ಅವರನ್ನು ಮತ್ತೆ ಕರೆತಂದಿದ್ದೇವೆ. ಇಲ್ಲಿಂದ ಮುಂದಕ್ಕೆ ಇನಷ್ಟು ವರ್ಷಗಳ ಕಾಲ ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡುತ್ತಾರೆ’ ಎಂದು ಹೇಳಿದರು ಶೂನ್ಯ.
‘ಶ್ರೀಧರ್ ಯಾವುದೇ ಕಮರ್ಷಿಯಲ್ ಸಿನಿಮಾ, ಆನಿಮೇಷನ್ ಸಿನಿಮಾ ನೋಡಿರಲಿಲ್ಲ. ಅಂಥದ್ದರಲ್ಲಿ ಶ್ರೀಧರ್ ಅವರ ಸಹೋದರನ ಪುತ್ರ ಅಭಿಗೆ ಒಂದಷ್ಟು ಸಿನಿಮಾಗಳನ್ನು ತೋರಿಸಿದ್ದಾರೆ. ಹಾಗಾಗಿ ಈ ಬಾರಿ ಶ್ರೀಧರ್ ಆಂಡ್ ಟೀಮ್ ವತಿಯಿಂದ ಎಂಟರ್ಟೇನ್ವೆುಂಟ್, ಬ್ಲಾಕ್ ಬಸ್ಟರ್ ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುತ್ತಾರೆ’ ಎಂದು ಹೇಳುತ್ತಾರೆ ಸಹ ನಿರ್ದೇಶಕಿ ವೀಣಾ. ‘ಅಗ್ನಿ ಶ್ರೀಧರ್ ಅವರ ಕಥೆಗಳನ್ನು ಸಿನಿಮಾ ಮಾಡುತ್ತಿರುವುದು ನನಗೆ ಕಲಿಯುವ ಪ್ರಕ್ರಿಯೆ ಇದ್ದ ಹಾಗೆ. ನಾನು ಸಿನಿಮಾ ತಂಡದ ಜತೆಗೆ ನಿರ್ವಪಕನ ರೀತಿ ಇರುವುದಿಲ್ಲ, ಎಲ್ಲರೂ ಒಂದೇ ಫ್ಯಾಮಿಲಿ ಎಂಬಂತೆ ಇರುತ್ತೇವೆ’ ಎಂದರು ನಿರ್ವಪಕ ಅಶು ಬೆದ್ರ. ‘ನಾನು ಯಾವ ಸಿನಿಮಾ ಮಾಡಿದಾಗಲೂ ಕಮರ್ಷಿಯಲ್ ಆಂಗಲ್ನಿಂದ ಮಾಡಿರಲಿಲ್ಲ.
ಜತೆಗೆ ‘ಕಿರಗೂರಿನ ಗಯ್ಯಾಳಿಗಳು’ ನಂತರ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಶೂನ್ಯ ಅವರ ಪರಿಚಯವಾಯಿತು. ಆ ಪರಿಚಯ ಇಲ್ಲಿಗೆ ಬಂದು ನಿಂತಿದೆ. ಜಯರಾಜ್ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿ ಎಲ್ಲರನ್ನೂ ರಂಜಿಸುತ್ತದೆ. ಇದಕ್ಕೆ ಧನಂಜಯ ಅವರನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ ಅವರ ‘ಅಲ್ಲಮ’ ಚಿತ್ರ ಮತ್ತು ನಮ್ಮ ಬಚ್ಚನ್ ಪುತ್ರ ರೋಷನ್. ಜಯರಾಜ್ ಪಾತ್ರಕ್ಕೂ ಧನಂಜಯ ಸೂಟ್ ಆಗುತ್ತಾರೆ. ಈ ಚಿತ್ರದಲ್ಲಿ ಜಯರಾಜ್ ಅವರ ಪುತ್ರ ಅಜಿತ್ ಕೂಡ ಒಂದು ಪಾತ್ರದಲ್ಲಿ ನಟಿಸಲಿದ್ದಾರೆ’ ಎಂದರು ಶ್ರೀಧರ್.