

ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಪ್ರಯೋಗಾತ್ಮಕ ಸಿನಿಮಾಗಳತ್ತ ಒಲವು ಮೂಡಿಸಿಕೊಂಡಿದ್ದಾರೆ. ಅದೇ ರೀತಿಯ ಸಿನಿಮಾಗಳನ್ನು ಅವರು ಆಯ್ದುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಇದೀಗ ಮತ್ತೊಂದು ವಿಶೇಷ ಸಿನಿಮಾದ ಮೂಲಕ ಜಾನ್ವಿ ಆಗಮಿಸಲಿದ್ದಾರೆ. ತಮಿಳಿನಲ್ಲಿ ಈಗಾಗಲೇ ತೆರೆಕಂಡು ಸೂಪರ್ ಹಿಟ್ ಆಗಿರುವ ಕೊಲಮಾವು ಕೋಕಿಲ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಕೆಲಸ ಪ್ರಗತಿಯಲ್ಲಿದೆ. ಮೂಲ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ.
ಇದನ್ನೂ ಓದಿ: ಎಂ.ಜಿ.ಶ್ರೀನಿವಾಸ್-ರಂಜನಿ ರಾಘವನ್ ‘ವೆಟರನ್’
2021ರಿಂದ ಶುರುವಾಗಲಿರುವ ಈ ಚಿತ್ರದಲ್ಲಿ ನಯನತಾರಾ ಮಾಡಿದ ಪಾತ್ರವನ್ನು ಜಾನ್ವಿ ಕಪೂರ್ ಮಾಡಲಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ, ಕನ್ನಡದಲ್ಲಿಯೂ ಕೊಲಮಾವು ಕೋಕಿಲ ಸಿನಿಮಾ ರಿಮೇಕ್ ಆಗುತ್ತಿದೆ. ಇಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ಪಂಕಜ ಕಸ್ತೂರಿ ಚಿತ್ರದ ಪೋಸ್ಟರ್ ಸಹ ಬಿಡುಗಡೆ ಆಗಿದ್ದು, ಜನವರಿಯಿಂದ ಶೂಟಿಂಗ್ ಸಹ ಶುರುವಾಗಲಿದೆ. ಕನ್ನಡ ರಿಮೇಕ್ಗೆ ಮಯೂರ ರಾಘವೇಂದ್ರ ನಿರ್ದೇಶನ ಮಾಡಲಿದ್ದಾರೆ.
ಅಂದಹಾಗೆ, ಹಿಂದಿಯಲ್ಲಿ ಸಿದ್ಧವಾಗಲಿರುವ ಈ ಚಿತ್ರವನ್ನು ಆನಂದ್ ಎಲ್.ರಾಯ್ ನಿರ್ಮಾಣ ಮಾಡಲಿದ್ದು, ಅಗ್ನಿಪತ್ ಸೇರಿ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಿದ್ದಾರ್ಥ್ ಸೇನ್ಗುಪ್ತಾ ನಿರ್ದೇಶನ ಮಾಡಲಿದ್ದಾರೆ. ಜನವರಿ 7ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಒಟ್ಟು 45 ದಿನಗಳಲ್ಲಿ ಚಿತ್ರೀಕರಣ ಮುಗಿಸಿಕೊಳ್ಳಲಿದೆ ತಂಡ. (ಏಜೆನ್ಸೀಸ್)