ಸೆನ್ಸಾರ್​ ಸರ್ಟಿಫಿಕೆಟ್​ ಖಚಿತ ಎಂದಿದ್ದ ವಿಜಯ್ ಫ್ಯಾನ್ಸ್​! ಭಾರಿ ವಿವಾದ ಬೆನ್ನಲ್ಲೇ ಪೋಸ್ಟ್​ ಡಿಲೀಟ್​, ಕ್ಷಮೆಯಾಚನೆ ​

ವಿಜಯ್ ಅಭಿನಯದ ಬಹುನಿರೀಕ್ಷಿತ ಕೊನೆಯ ಚಿತ್ರ 'ಜನ ನಾಯಗನ್​'
ವಿಜಯ್ ಅಭಿನಯದ ಬಹುನಿರೀಕ್ಷಿತ ಕೊನೆಯ ಚಿತ್ರ 'ಜನ ನಾಯಗನ್​'
Published on

ಪ್ರಮುಖ ಮುಖ್ಯಾಂಶಗಳು

  • ಜನ ನಾಯಗನ್​ ಚಿತ್ರಕ್ಕೆ ಸೆನ್ಸಾರ್​ ಮಂಡಳಿಯಿಂದ ಗ್ರೀನ್​ ಸಿಗ್ನಲ್​
  • ಸುಳ್ಳು ಸುದ್ದಿ ಹರಡಿದ ವಿಜಯ್​ ಫ್ಯಾನ್​ ಪೇಜ್​ನಿಂದ ಕ್ಷಮೆಯಾಚನೆ
Jana Nayagan: ತಮಿಳುನಾಡಿನ ಸಿಎಂ, ಕಾಲಿವುಡ್​ನ ಸ್ಟಾರ್​ ನಟ, ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್'​ ರಿಲೀಸ್​ಗೆ ಸೆನ್ಸಾರ್​ ಮಂಡಳಿ ಗ್ರೀನ್​ ಸಿಗ್ನಲ್​ ಕೊಟ್ಟಿದೆ ಎಂಬ ಫ್ಯಾನ್​​ ಪೇಜ್​ ಪೋಸ್ಟ್​ ಸದ್ಯ ಚಿತ್ರರಂಗದ ಅಂಗಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಅಸಲಿಗೆ ವಿಜಯ್ ಚುನಾವಣೆಗೆ ನಿಲ್ಲುವ ಮೊದಲೇ ಸೆನ್ಸಾರ್​ ಮಂಡಳಿ ಜನ ನಾಯಗನ್​ ಚಿತ್ರದ ರಿಲೀಸ್​ಗೆ ಸಂಕಷ್ಟ ತಂದಿಟ್ಟಿತು. ಈ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ ಎಂಬುದು ಗಮನಾರ್ಹ. ಕೋರ್ಟ್​ ಮೆಟ್ಟಿಲೇರಿದ ಚಿತ್ರತಂಡಕ್ಕೆ ಅಂದುಕೊಂಡ ದಿನದಂದೇ ಬಿಡುಗಡೆ ಭಾಗ್ಯ ನೀಡದಂತೆ ಮಾಡಿದ್ದು ಸಿಬಿಎಫ್​ಸಿ. ಜ.09ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿದ್ದ ವಿಜಯ್​ ಚಿತ್ರ, ಸಿಎಂ ಆದ ಮೇಲೂ ತೆರೆಗೆ ಬರದಿರುವುದು ನಟನ ಅಭಿಮಾನಿಗಳನ್ನು ಕೆರಳಿಸಿದೆ. ಮತ್ತೊಂದೆಡೆ, ಸೆನ್ಸಾರ್​ ಮಂಡಳಿಯಿಂದ ಅಧಿಕೃತವಾಗಿ ಗ್ರೀನ್​ ಸಿಗ್ನಲ್​ ಸಿಗುವ ಮುನ್ನವೇ ವಿಜಯ್​ ಫ್ಯಾನ್​ ಪೇಜ್​ವೊಂದು ಮಾಡಿದ ಎಡವಟ್ಟು ಕೆಲವರ ಪಿತ್ತವನ್ನು ನೆತ್ತಿಗೇರಿಸಿದೆ.
'ಜನ ನಾಯಗನ್' ಚಿತ್ರದ ನಕಲಿ ಸೆನ್ಸಾರ್ ಪ್ರಮಾಣಪತ್ರವನ್ನು ಹಂಚಿಕೊಂಡ ವಿಜಯ್​ ಫ್ಯಾನ್​ ಪೇಜ್, ಸಿಬಿಎಫ್​ಸಿ ಚಿತ್ರದ ರಿಲೀಸ್​ಗೆ ಗ್ರೀನ್​ ಸಿಗ್ನಲ್​ ಕೊಟ್ಟಿದೆ. ಶೀಘ್ರವೇ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ತೆರೆಗೆ ಅಪ್ಪಳಿಸಲಿದೆ ಎಂದು​ ಅಭಿಮಾನಿಗಳ ಪುಟದಲ್ಲಿ ಹಾಕಲಾದ ಪೋಸ್ಟ್​ ದಳಪತಿಯ ಅಪ್ಪಟ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿತು. ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಟೀಕೆ, ಖಂಡನೆ ವ್ಯಕ್ತವಾಯಿತು. ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಜೋಕೇ ಎಂಬ ಎಚ್ಚರಿಕೆ ಬೆನ್ನಲ್ಲೇ ಫ್ಯಾನ್​ ಪೇಜ್​ ಬಹಿರಂಗವಾಗಿ ಕ್ಷಮೆ ಕೇಳಿ, ನಕಲಿ ಪೋಸ್ಟ್​ ಅನ್ನು ಡಿಲೀಟ್​ ಮಾಡಿದೆ.
ಸಿನಿ ವರದಿಗಳ ಪ್ರಕಾರ, ಜನ ನಾಯಗನ್ ಇನ್ನೂ ಸಿಬಿಎಫ್‌ಸಿ ನೀಡಲಿರುವ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಆಗಲಿ ಅಥವಾ ಚಿತ್ರದ ನಿರ್ದೇಶಕರೇ ಆಗಲಿ, ರಿಲೀಸ್​ಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ರಿಲೀಸ್​ ದಿನಾಂಕವನ್ನು ಘೋಷಿಸುತ್ತೇವೆ ಎಂದು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಮೇ ತಿಂಗಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net