'ಸಿಎಂ ವಿಜಯ್​ ಅಲ್ಲ...' ಥಿಯೇಟರ್​ಗಳಲ್ಲಿ ಫ್ಯಾನ್ಸ್ ಚೀರಾಟ ಜೋರಾಗಿಸಲಿದೆ 'ಜನ ನಾಯಗನ್​' ಹೊಸ ಟೈಟಲ್​ ಕಾರ್ಡ್​

ನಟ ವಿಜಯ್ ಅಭಿನಯದ ಕೊನೆ ಸಿನಿಮಾ 'ಜನ ನಾಯಗನ್​'
ನಟ ವಿಜಯ್ ಅಭಿನಯದ ಕೊನೆ ಸಿನಿಮಾ 'ಜನ ನಾಯಗನ್​'
Published on

ಪ್ರಮುಖ ಮುಖ್ಯಾಂಶಗಳು

  • ಬಹುನಿರೀಕ್ಷಿತ ತಮಿಳು ಸಿನಿಮಾ ಜನ ನಾಯಗನ್​ ಜು.23ಕ್ಕೆ ತೆರೆಗೆ
  • ದಳಪತಿ ವಿಜಯ್ ಅಭಿನಯದ ಕೊನೆ ಸಿನಿಮಾ ರಿಲೀಸ್​ಗೆ ಫ್ಯಾನ್ಸ್ ಕಾತರ
  • ಕಡೆಗೂ ಟೈಟಲ್​ ಕಾರ್ಡ್​ ಬದಲಾವಣೆಗೆ ಕೋರಿದ್ದ ಬೇಡಿಕೆ ಈಡೇರಿಕೆ
Jana Nayagan: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳನ್ನೇ ಮಣಿಸಿ, ರಾಜ್ಯದ 234 ಸ್ಥಾನಗಳಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್​ ಈಗ ತಮಿಳುನಾಡಿನ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದ ಗಣ್ಯರಲ್ಲಿ ಭಾರಿ ಉತ್ಸಾಹ ತಂದಿದೆ. ಇದೇ ಸಮಯದಲ್ಲಿ ಬಹುದಿನಗಳಿಂದ ವೈಟಿಂಗ್​ ಲಿಸ್ಟ್​ನಲ್ಲಿದ್ದ 'ಜನ ನಾಯಗನ್'​ ರಿಲೀಸ್​ ಸದ್ಯ ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಲು ಸಜ್ಜಾಗಿದೆ.
ರಾಜ್ಯದ ಜನತೆ ಮತ್ತು ಅಭಿಮಾನಿಗಳಿಂದ ಅಭೂತಪೂರ್ವ ಬೆಂಬಲ ಪಡೆದ ವಿಜಯ್ ಈಗ ಬಹುದಿನಗಳಿಂದ ರಿಲೀಸ್​ನಿಂದ ದೂರ ಉಳಿದಿದ್ದ ತಮ್ಮ ಬಹುನಿರೀಕ್ಷಿತ 'ಜನ ನಾಯಗನ್'​ ಮೂಲಕ ಸಿನಿಪ್ರಿಯರ ಎದುರು ಮಾಸ್​ ಎಂಟ್ರಿಕೊಡಲು ಸಜ್ಜಾಗಿದ್ದಾರೆ. ಇದೇ ಜು.23ಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲಿರುವ ಚಿತ್ರಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಟೈಟಲ್​ ಕಾರ್ಡ್​ನಲ್ಲಿ ಕೇಳಿಕೊಂಡ ಮನವಿಯನ್ನು ಈಡೇರಿಸಿ ಎಂದು ನಿರ್ಮಾಣ ಸಂಸ್ಥೆಗೆ ಡಿಮಾಂಡ್​ ಮಾಡಿದ್ದರು. ಅದೀಗ, ಕಡೆಗೂ ನೆರವೇರಿದೆ.
ಈ ವರ್ಷದ ಜ.09ರಂದೇ ತೆರೆಗೆ ಬರಬೇಕಿದ್ದ ವಿಜಯ್​ ಚಿತ್ರಕ್ಕೆ ಸಾಕಷ್ಟು ಅಡಚಣೆಗಳು ಉಂಟಾಯಿತು. ಸೆನ್ಸಾರ್​ ಮಂಡಳಿ ತಡೆಗೆ ಚಿತ್ರತಂಡ ಕೋರ್ಟ್​ ಮೆಟ್ಟಿಲೇರಿದ್ದ ತಡ, ಅಂದಿನಿಂದ ಇಂದಿನವರೆಗೂ ಚಿತ್ರದ ಬಗ್ಗೆ ಒಂದೇ ಒಂದು ಸುದ್ದಿಯೂ ಬಂದಿರಲಿಲ್ಲ. ಚುನಾವಣೆ ಇದ್ದ ಕಾರಣ, ತಾತ್ಕಾಲಿಕವಾಗಿ ಸಿನಿಮಾ ರಿಲೀಸ್ ಪದೇ ಪದೇ​ ಮುಂದೂಡಿಕೆ ಆಗಿತ್ತು. ಆದರೆ, ಇಂತಹ ದಿನ ಎಂದು ಅಧಿಕೃತವಾಗಿ ಚಿತ್ರತಂಡಕ್ಕೆ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಕಾರಣ, ಸೆನ್ಸಾರ್​ ಮಂಡಳಿ ತಂದಿಟ್ಟಿದ್ದ ಪಜೀತಿ. ಆದರೀಗ, ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ವಿಜಯ್ ಗೆಲುವಿನ ಬಳಿಕವೇ ಸಿನಿಮಾ ತೆರೆಗೆ ಬರುತ್ತಿದ್ದು, ಫ್ಯಾನ್ಸ್​ಗಳಲ್ಲಿ ನಟನ ಕ್ರೇಜ್ ಡಬಲ್ ಆಗಿದೆ.
ಅನೇಕ ವಿಜಯ್​ ಅಭಿಮಾನಿಗಳು ಮತ್ತು ಬೆಂಬಲಿಗರು ರಿಲೀಸ್​ಗೆ ಪ್ರತಿಕ್ರಿಯಿಸಿದ್ದು, ಸಿನಿಮಾದ ಟೈಟಲ್ ಕಾರ್ಡ್​ನಲ್ಲಿ ಕೇವಲ ದಳಪತಿ ವಿಜಯ್​ ಅಲ್ಲ, ಸಿಎಂ ದಳಪತಿ ವಿಜಯ್​ ಎಂದು ಬದಲಿಸಿ. ಒಬ್ಬ ಲೀಡರ್​ನನ್ನು ಘೋಷಿಸಿಲ್ಲ, ಜನರೇ ಅವರನ್ನು ತಮ್ಮ ನಾಯಕನಾಗಿ ಆಯ್ಕೆ ಮಾಡಿದ್ದಾರೆ ಎಂಬ ಹಲವು ಕಾಮೆಂಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ವಿಜಯ್​ ಫ್ಯಾನ್ಸ್ ಆಗ್ರಹಕ್ಕೆ ಅಸ್ತು ಎಂದಿರುವ​ ನಿರ್ದೇಶಕರು ಮತ್ತು ನಿರ್ಮಾಪಕರು, ಇದೀಗ ಟೈಟಲ್​ ಕಾರ್ಡ್​ನಲ್ಲಿ ಕೇವಲ ಸಿಎಂ ದಳಪತಿ ವಿಜಯ್​ ಬದಲಿಗೆ ಸನ್ಮಾನ್ಯ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್​ ಎಂದು ಹಾಕಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬಾಕ್ಸ್ಆಫೀಸ್​ ದಾಖಲೆಗಳು ಉಡೀಸ್​?

ಇದು ವಿಜಯ್ ನಟನೆಯ ಕೊನೆಯ ಸಿನಿಮಾ ಆಗಿರುವುದರಿಂದ ಬಾಕ್ಸ್ ಆಫೀಸ್​ ದಾಖಲೆಗಳು ಉಡೀಸ್ ಆಗುವ ನಿರೀಕ್ಷೆಗಳು ಹೆಚ್ಚಿವೆ. ವಿಜಯ್​ ಅಭಿನಯದ ಹಿಂದಿನ ಸಿನಿಮಾಗಳಾದ ಗೋಟ್​, ಬೀಸ್ಟ್​, ಮಾಸ್ಟರ್​​ ರೆಕಾರ್ಡ್​ಗಳನ್ನು ಬ್ರೇಕ್​ ಮಾಡಲಿದೆ ಎಂಬ ಮಾತುಗಳು ಕಾಲಿವುಡ್​ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತಿದೆ. ಮತ್ತೊಂದೆಡೆ, ವಿಜಯ್ ಸಿಎಂ ಆದಮೇಲೆ ಭಾರಿ ಕ್ರೇಜ್​ ಇರುವ ಹಿನ್ನೆಲೆ ಸಿನಿಮಾ ಮೊದಲ ದಿನವೇ ಜಾಗತಿಕವಾಗಿ 1000 ಕೋಟಿ ಕ್ಲಬ್ ಸೇರಬಹುದು ಎಂಬ ನಿರೀಕ್ಷೆಗಳಿವೆ. ಒಟ್ಟಾರೆ, ಸಿನಿಮಾ ಹೇಗಿರಲಿದೆ? ಹೇಗೆ ಮೂಡಿಬರಲಿದೆ, ಯಾವೆಲ್ಲ ದಾಖಲೆಗಳು ಬ್ರೇಕ್​ ಆಗಲಿವೆ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net