ದಳಪತಿ ಫ್ಯಾನ್ಸ್​ ಡಿಮಾಂಡ್​ಗೆ ಗ್ರೀನ್​ ಸಿಗ್ನಲ್​? ಆಗೋದೆಲ್ಲ ಒಳ್ಳೆಯದು ಅನ್ನೋದಕ್ಕೆ 'ಜನ ನಾಯಗನ್'​ ಜ್ವಲಂತ ಸಾಕ್ಷಿ!

ತಮಿಳುನಾಡು ಸಿಎಂ, ನಟ ವಿಜಯ್​ ಅಭಿನಯದ ಕೊನೆ ಸಿನಿಮಾ 'ಜನ ನಾಯಗನ್​'
ತಮಿಳುನಾಡು ಸಿಎಂ, ನಟ ವಿಜಯ್​ ಅಭಿನಯದ ಕೊನೆ ಸಿನಿಮಾ 'ಜನ ನಾಯಗನ್​'
Published on

ಪ್ರಮುಖ ಮುಖ್ಯಾಂಶಗಳು

  • ಬಹುನಿರೀಕ್ಷಿತ ಜನ ನಾಯಗನ್​ ರಿಲೀಸ್​ಗೆ ಸಕಲ ಸಿದ್ಧತೆಗಳು
  • ರಿಲೀಸ್​ಗೆ ಪರದಾಡುತ್ತಿದ್ದ ಚಿತ್ರದ ಬಿಡುಗಡೆಗೆ ಶೀಘ್ರವೇ ಮಹೂರ್ತ
  • ಸಿನಿಮಾದ ಟೈಟಲ್​ ಕಾರ್ಡ್​ನಲ್ಲಿ ವಿಜಯ್​ ಹೆಸರು ಬದಲಾವಣೆಗೆ ದಳಪತಿ ಫ್ಯಾನ್ಸ್ ಪಟ್ಟು
Jana Nayagan: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳನ್ನೇ ಮಣಿಸಿ, ರಾಜ್ಯದ 234 ಸ್ಥಾನಗಳಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ಪ್ರಸ್ತುತ ತಮಿಳುನಾಡಿನ ಸಿಎಂ ವಿಜಯ್​ಗೆ ಸದ್ಯ ದೇಶವ್ಯಾಪಿ ಅಭಿಮಾನಿಗಳ ಶುಭಹಾರೈಕೆಗಳು ಜೋರಾಗಿವೆ. ಮತ್ತೊಂದೆಡೆ, ಅವರ ನಟನೆಯ ಬಹುನಿರೀಕ್ಷಿತ 'ಜನ ನಾಯಗನ್'​ ರಿಲೀಸ್​ಗೆ ಶೀಘ್ರವೇ ಅಧಿಕೃತ ಮಹೂರ್ತ ಫಿಕ್ಸ್ ಆಗಲಿದ್ದು, ಈ ಬಾರಿ ಯಾವುದೇ ಬದಲಾವಣೆ ಅಥವಾ ಮುಂದೂಡಿಕೆ ಇರುವುದಿಲ್ಲ ಎಂಬುದಂತು ಖಚಿತವಾಗಿದೆ.  
ತನ್ನ ಚೊಚ್ಚಲ ರಾಜಕೀಯ ಪ್ರವೇಶದಲ್ಲಿಯೇ ತಮಿಳುನಾಡಿನ ಜನತೆಯಿಂದ ಅಭೂತಪೂರ್ವ ಬೆಂಬಲ ಪಡೆದ ವಿಜಯ್​ಗೆ ಇಂದಿಗೂ ಗಣ್ಯರು, ಚಿತ್ರರಂಗದ ಕಲಾವಿದರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಿಎಂ ಆಗಿ ತಮಿಳುನಾಡಿನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದಿರುವ ವಿಜಯ್,​ ತಾನೂ ಕೂಡ ಜನಸಾಮಾನ್ಯರಲ್ಲಿ ಒಬ್ಬ ಎಂಬಂತೆ ಸರಳವಾಗಿ ಬಸ್​ ಪ್ರಯಾಣ, ತಮ್ಮ ಕಾರನ್ನು ತಾವೇ ಚಲಾಯಿಸುವ ಮೂಲಕ ರಾಜ್ಯದ ಜನತೆಯ ಹೃದಯವನ್ನು ಗೆಲ್ಲುತ್ತಿದ್ದಾರೆ. ಈಗ ಅವರ ಸಿನಿಮಾ ಬಿಡುಗಡೆಗೆ ನಿರೀಕ್ಷೆಗಳು ದುಪ್ಪಟ್ಟಾಗಿದ್ದು, ಫ್ಯಾನ್ಸ್​ ಟೈಟಲ್​ ಕಾರ್ಡ್​ನಲ್ಲಿ ಬದಲಾವಣೆಗೆ ಆಗ್ರಹಿಸಿರುವುದು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.   
ಈ ವರ್ಷದ ಜ.09ರಂದೇ ತೆರೆಗೆ ಬರಬೇಕಿದ್ದ ವಿಜಯ್​ ಚಿತ್ರಕ್ಕೆ ಆರಂಭದಲ್ಲಿ ಸಾಕಷ್ಟು ಅಡಚಣೆಗಳು ಉಂಟಾಯಿತು. ಸೆನ್ಸಾರ್​ ಮಂಡಳಿ ತಡೆಗೆ ಚಿತ್ರತಂಡ ಕೋರ್ಟ್​ ಮೆಟ್ಟಿಲೇರಿದ್ದ ತಡ, ಅಂದಿನಿಂದ ಇಂದಿನವರೆಗೂ ಚಿತ್ರದ ಬಗ್ಗೆ ಒಂದೇ ಒಂದು ಸುದ್ದಿಯೂ ಇರಲಿಲ್ಲ. ಚುನಾವಣೆ ಇದ್ದ ಕಾರಣ, ತಾತ್ಕಾಲಿಕವಾಗಿ ಸಿನಿಮಾ ರಿಲೀಸ್​ ಮುಂದೂಡಿಕೆ ಆಗಿತ್ತು. ಆದರೆ, ಇಂತಹ ದಿನ ಎಂದು ಅಧಿಕೃತವಾಗಿ ಚಿತ್ರತಂಡಕ್ಕೆ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಕಾರಣ, ಸೆನ್ಸಾರ್​ ಮಂಡಳಿ ತಂದಿಟ್ಟಿದ್ದ ಪಜೀತಿ. ಆದರೀಗ, ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ವಿಜಯ್ ಸಿಎಂ ಆದ ಬಳಿಕವೇ ಸಿನಿಮಾ ತೆರೆಗೆ ಬರುತ್ತಿರುವುದು, ಫ್ಯಾನ್ಸ್​ಗಳಲ್ಲಿ ನಟನ ಕ್ರೇಜ್​ ಡಬಲ್ ಆಗಿದೆ ಮತ್ತು ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ.  
ಅನೇಕ ವಿಜಯ್​ ಅಭಿಮಾನಿಗಳು ಮತ್ತು ಬೆಂಬಲಿಗರು ರಿಲೀಸ್​ಗೆ ಪ್ರತಿಕ್ರಿಯಿಸಿದ್ದು, ಸಿನಿಮಾದ ಟೈಟಲ್ ಕಾರ್ಡ್​ನಲ್ಲಿ ದಳಪತಿ ವಿಜಯ್​ ಅಲ್ಲ, ಸಿಎಂ ದಳಪತಿ ವಿಜಯ್​ ಎಂದು ಬದಲಿಸಿ. ಒಬ್ಬ ಲೀಡರ್​ನನ್ನು ಘೋಷಿಸಿಲ್ಲ, ಜನರೇ ಅವರನ್ನು ಆಯ್ಕೆ ತಮ್ಮ ನಾಯಕನಾಗಿ ಆಯ್ಕೆ ಮಾಡಿದ್ದಾರೆ ಎಂಬ ಹಲವು ಕಾಮೆಂಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅಭಿಮಾನಿಗಳ ಆಗ್ರಹಕ್ಕೆ ಜನ ನಾಯಗನ್​ ನಿರ್ದೇಶಕರು ಮತ್ತು ನಿರ್ಮಾಪಕರು ಟೈಟಲ್​ ಕಾರ್ಡ್​ನಲ್ಲಿ ಹೆಸರು ಬದಲಿಸುತ್ತಾರೋ ಅಥವಾ ಎಂದಿನಂತೆ ದಳಪತಿ ವಿಜಯ್​ ಎಂದೇ ಹಾಕ್ತಾರೋ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ಕೆವಿಎನ್​ ಸಂಸ್ಥೆ ಹೇಳಿಕೆ

'ಜನ ನಾಯಗನ್' ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್, ಇತ್ತೀಚೆಗಷ್ಟೇ ಸಿನಿಮಾ ರಿಲೀಸ್​ಗೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೆಟ್​ ನೀಡಿದ ಎಂಬ ನಕಲಿ ಪೋಸ್ಟ್​​ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ಚಿತ್ರಕ್ಕೆ ಇನ್ನೂ ಪ್ರಮಾಣೀಕರಣ ದೊರೆತಿಲ್ಲ. ಸಿಬಿಎಫ್‌ಸಿ ತನ್ನ ಇತ್ತೀಚಿನ ಬದಲಾವಣೆಗಳನ್ನು ಪೂರ್ಣಗೊಳಿಸಿದೆ. ಅಂತಿಮ ಬದಲಾವಣೆಗಳಾದ ತಕ್ಷಣ ಗ್ರೀನ್​ ಸಿಗ್ನಲ್​ ಕೊಡಲಿದೆ ಎಂದು ಬಹಿರಂಗಪಡಿಸಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net