ನವರಸಗಳ ದರ್ಶನ: ಈ ವಾರ ತೆರೆ ಕಾಣುತ್ತಿವೆ ಕನ್ನಡದ ಭಿನ್ನ-ವಿಭಿನ್ನ ಒಂಬತ್ತು ಸಿನಿಮಾಗಳು

movies
Published on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ 2025ರ ವರ್ಷ ಆಶಾದಾಯಕವಾಗಿದೆ. ವರ್ಷದ ಮೊದಲ ನಾಲ್ಕು ವಾರಗಳಲ್ಲಿ ಒಟ್ಟು 12 ಚಿತ್ರಗಳು ತೆರೆಕಂಡಿದ್ದವು. ಇದೀಗ ಜನವರಿ ಅಂತ್ಯದಲ್ಲಿ ಅಂದರೆ ಇಂದು (ಜ.31) ಒಟ್ಟು ಕನ್ನಡದ 9 ಹಾಗೂ ಕನ್ನಡಕ್ಕೆ ಡಬ್ ಆದ ಒಂದು ಸಿನಿಮಾ ಸೇರಿ ಒಟ್ಟು ಹತ್ತು ಚಿತ್ರಗಳು ರಿಲೀಸ್ ಆಗುತ್ತಿವೆ.

ಪ್ರಜ್ವಲ್ ದೇವರಾಜ್‌ರ ‘ಗಣ’: ನಟ ಪ್ರಜ್ವಲ್ ದೇವರಾಜ್ ‘ಗಣ’ ಚಿತ್ರದ ಮೂಲಕ ವರ್ಷದ ಖಾತೆ ಆರಂಭಿಸುತ್ತಿದ್ದಾರೆ. ಆ್ಯಕ್ಷನ್-ಥ್ರಿಲರ್ ಜಾನರ್ ಈ ಸಿನಿಮಾವನ್ನು ಹರಿಪ್ರಸಾದ್ ಜಕ್ಕಾ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಪ್ರಜ್ವಲ್‌ಗೆ ವೇದಿಕಾ, ಯಶ ಶಿವಕುಮಾರ್ ಇಬ್ಬರು ನಾಯಕಿಯರಿದ್ದಾರೆ. ಸಂಪತ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಕೃಷಿ ತಾಪಂಡ ಕಲಾ ಬಳಗದಲ್ಲಿದ್ದಾರೆ.

ನವೀನ ಹುಡುಕಾಟದ ಕನಸು: ಕನ್ನಡದ ಭರವಸೆಯ ನಟ ನವೀನ್ ಶಂಕರ್ ಹಾಗೂ ನಟಿ ಅಪೂರ್ವ ಭಾರದ್ವಾಜ್ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ‘ನೋಡಿದವರು ಏನಂತಾರೆ’. ಕುಲದೀಪ್ ಕಾರಿಯಪ್ಪ ನಿರ್ದೇಶನದ ಈ ಚಿತ್ರದಲ್ಲಿ ಬದುಕಿನ ಹುಡುಕಾಟ ಕಾಣಬಹುದಾಗಿದೆ. ಸ್ಪಂದನಾ ಪ್ರಸಾದ್, ಪದ್ಮಾವತಿ ರಾವ್ ಹಾಗೂ ಶ್ವೇತಾ ಶ್ರೀನಿವಾಸ್ ಕಲಾ ಬಳಗದಲ್ಲಿದ್ದಾರೆ.

ಪ್ರಯಾಣದ ಕಥೆ ‘ಪಾರು ಪಾರ್ವತಿ’: ನಟಿ ದೀಪಿಕಾ ದಾಸ್ ನಟಿಸುತ್ತಿರುವ ‘ಪಾರು ಪಾರ್ವತಿ’ ಇದೊಂದು ಪ್ರಯಾಣದ ಕಥೆಯಾಗಿದೆ. ಬೆಂಗಳೂರಿನಿಂದ ಸೋಲೋ ಟ್ರಿಪ್ ಹೊರಡುವ ಪಾಯಲ್ ಜೀವನದ ಕಥೆ ಇಲ್ಲಿದೆ. ರೋಹಿತ್ ಕೀರ್ತಿ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ದಾಸ್ ಜತೆಗೆ ಪೂನಂ ಸರ್ ನಾಯಕ್, ವಾಜ್ ಆಶ್ರ್ ಕಾಣಿಸಿಕೊಳ್ಳಲಿದ್ದಾರೆ.

ಬೇಗೂರು ಕಾಲೋನಿ’ಯಲ್ಲಿ ಅಬ್ಬರ: ಬಿಗ್‌ಬಾಸ್ ‘ಬಿಗ್‌ಬಾಸ್ ಕನ್ನಡ- ಸೀಸನ್ 8’ರ ಸ್ಪರ್ಧಿ ರಾಜೀವ್ ಹನು ನಾಯಕನಾಗಿರುವ ಸಿನಿಮಾ ‘ಬೇಗೂರು ಕಾಲೋನಿ’. ಬೆಂಗಳೂರಿನ ಮಧ್ಯಮ ವರ್ಗದ ಜನರ ಜೀವನದ ಕಥೆಗೆ ್ಲೈಯಿಂಗ್ ಕಿಂಗ್ ಮಂಜು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಇಲ್ಲಿ ರಾಜೀವ್‌ಗೆ ಇಬ್ಬರು ನಾಯಕಿಯರಿದ್ದು ಪಲ್ಲವಿ, ಕೀರ್ತಿ ಭಂಡಾರಿ ನಟಿಸಿದ್ದಾರೆ.

ಹೊಸಬರ ಐದು ಸಿನಿಮಾಗಳು: ಸಮರ್ಥ್ ಮಂಜುನಾಥ್ ನಿರ್ದೇಶನ ಹಾಗೂ ಅರ್ಥ ಹರ್ಷನ್, ಸಂಗೀತಾ ರಾಜರಾಮ್ ನಟಿಸಿರುವ ‘ಕಾಡು ಮಳೆ, ದೇಶಪ್ರೇಮ ಸಾರುವ ‘ಹೈನಾ’, ಹಾರರ್-ಥ್ರಿಲ್ಲರ್‌ನ ‘ಅಲ್ಲೇ ಡ್ರಾ, ಅಲ್ಲೇ ಬಹುಮಾನ, ಉತ್ತರ ಕರ್ನಾಟಕ ಸೊಗಡಿನ ‘ರಾವುತ’ ಹಾಗೂ ರಣಧೀರ್ ವಿಜಯ್ ನಟಿಸಿ, ನಿರ್ದೇಶಿಸಿರುವ ‘ರಾಜ ರಾಣಿ’ ಸೇರಿ ಕಳೆದ ವಾರ ಬಿಡುಗಡೆಯಾಗಿದ್ದ ಉನ್ನಿ ಮುಕುಂದನ್ ನಟನೆಯ ‘ಮಾರ್ಕೋ’ ಈ ವಾರ ಕನ್ನಡ ಆವತರಣಿಕೆಯಲ್ಲಿ ರಿಲೀಸ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net