ಜೇಮ್ಸ್​ಗೂ ಎತ್ತಂಗಡಿ ಆತಂಕ; 'ದಯವಿಟ್ಟು ಸಹಕರಿಸಿ' ಎಂದು ನಿರ್ದೇಶಕರ ಮನವಿ..

1254347
Published on

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್​ ಅವರ ಅಭಿನಯದ ಕೊನೆಯ ಸಿನಿಮಾ ಅವರ ಜನ್ಮದಿನವಾದ ಮಾ. 17ರಂದು ಅದ್ಧೂರಿಯಾಗಿ ಬಿಡುಗಡೆಗೊಂಡಿದ್ದು, ಇದೀಗ ಒಂದು ವಾರ ಕಳೆಯುವುದರೊಳಗೆ ಎತ್ತಂಗಡಿ ಆತಂಕವನ್ನು ಎದುರಿಸುತ್ತಿದೆ.

ಸಿನಿಮಾ ಬಿಡುಗಡೆಯಾದ ಮೊದಲ ಶೋನಿಂದಲೇ ಅದ್ಭುತ ಪ್ರತಿಕ್ರಿಯೆ ಗಿಟ್ಟಿಸಿಕೊಂಡು ಭರ್ಜರಿ ಕಲೆಕ್ಷನ್ ಕೂಡ ಗಳಿಸುತ್ತಿದ್ದರೂ ಕೆಲವೆಡೆ ಈ ಚಿತ್ರದ ಶೋ ಸ್ಥಗಿತಗೊಳಿಸಲಾಗಿದೆ ಎಂಬುದು ಚಿತ್ರತಂಡ ಮಾತ್ರವಲ್ಲದೆ ಅಪ್ಪು ಅಭಿಮಾನಿಗಳಿಗೂ ನಿರಾಶೆ ಮೂಡಿಸಲಾರಂಭಿಸಿದೆ.ರಾಜ್ಯದ ಹಲವೆಡೆ ಜೇಮ್ಸ್​ ಚಿತ್ರವನ್ನು ತೆಗೆಯುತ್ತಿದ್ದಾರೆ ಎಂಬ ಕುರಿತು ಚಿತ್ರದ ನಿರ್ದೇಶಕ ಚೇತನ್​ಕುಮಾರ್ ಸಂಬಂಧಪಟ್ಟವರಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಎಲ್ಲ ಚಿತ್ರಮಂದಿರಗಳ ಮಾಲೀಕರಿಗೂ ಧನ್ಯವಾದ ತಿಳಿಸುತ್ತ, ತಮ್ಮೆಲ್ಲರ ಸಹಕಾರದಿಂದಲೇ ಜೇಮ್ಸ್ ಸಿನಿಮಾ ದೊಡ್ಡ ಯಶಸ್ಸು ಗಳಿಸಿದೆ. ಇದೇ ಸಹಕಾರ ಎರಡನೇ ವಾರವೂ ಇರಲಿ ಎಂದು ಕೇಳಿಕೊಂಡಿರುವ ಅವರು ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಇಂದು ಬೆಳಗಿನಿಂದ ರಾಜ್ಯದ ಹಲವು ಕಡೆಗಳಿಂದ ಅಭಿಮಾನಿಗಳು ಕರೆ ಮಾಡಿ, ಜೇಮ್ಸ್ ಚಿತ್ರ ವೀಕ್ಷಣೆಗೆ ಲಭ್ಯ ಇಲ್ಲದಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಪುನೀತ್ ಅವರ ಕೊನೆಯ ಸಿನಿಮಾ, ಇದನ್ನು ಚಿತ್ರಮಂದಿರದಲ್ಲೇ ನೋಡಬೇಕು ಎಂಬುದು ಲಕ್ಷಾಂತರ ಅಭಿಮಾನಿಗಳ ಆಸೆ, ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದು ಕನ್ನಡ ಸಿನಿಮಾ, ಬರೀ ಸಿನಿಮಾ ಆಗಿ ಉಳಿದಿಲ್ಲ, ಇದು ಕನ್ನಡಿಗರ ಭಾವನೆಯಾಗಿ ಬದಲಾವಣೆ ಆಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net