

ಚಿತ್ರ: ಜಲಂಧರ
ನಿರ್ದೇಶನ: ವಿಷ್ಣು ಪ್ರಸನ್ನ
ತಾರಾಗಣ: ಪ್ರಮೋದ್ ಶೆಟ್ಟಿ, ರುಷಿಕಾ ರಾಜ್, ಬಲ ರಾಜವಾಡಿ, ಲೋಕಿ, ಆರೋಹಿತಾ ಗೌಡ ಮತ್ತಿತರರು
ಶಿವ ಸ್ಥಾವರಮಠ
ಅದು ಕಾವೇರಿ ತೀರದ ಪುಣ್ಯಕ್ಷೇತ್ರ ಮದುವತ್ತಿ. ಪುಣ್ಯಸ್ನಾನಕ್ಕಾಗಿ ಬರುವ ಕೆಲವರು ನದಿಯಲ್ಲಿ ಆಕಸ್ಮಿಕವಾಗಿ ನೀರು ಪಾಲಾಗುತ್ತಿರುತ್ತಾರೆ. ಇಂತಹ ಪ್ರಕರಣಗಳು ಹೆಚ್ಚಾದಾಗ ಮತ್ತಷ್ಟು ಮಾಹಿತಿ ತಿಳಿಯಲು ಬರುವ ಪೊಲೀಸ್ ಅಧಿಕಾರಿ ಅಭಿಜಿತ್ (ಪ್ರಮೋದ್ ಶೆಟ್ಟಿ) ಪತ್ನಿ (ರುಷಿಕಾ ರಾಜ್) ಕೂಡ ಸಾವಿಗೀಡಾಗುತ್ತಾಳೆ. ಈಜು ಬರುವ ಪತ್ನಿಯೇ ನೀರು ಪಾಲಾಗುವುದು ಹೇಗೆ? ಇದರಲ್ಲಿ ಬೇರೇನೋ ಕೈವಾಡ ಇದೆ ಎಂದು ಸಾವಿನ ಬಗ್ಗೆ ಅಭಿಜಿತ್ ತನಿಖೆ ಕೈಗೊಳ್ಳುತ್ತಾನೆ. ಅಲ್ಲಿಂದ ನೈಜ ‘ಜಲಂಧರ’ನ ಕಥೆ ತೆರೆದುಕೊಳ್ಳುತ್ತದೆ.
‘ಜಲಂಧರ’ನ ಮೂಲಕ ನಿರ್ದೇಶಕ ವಿಷ್ಣು ಪ್ರಸನ್ನ ಹಳ್ಳಿ ಸೊಗಡಿನ ಕಥೆ ಹೇಳಿದ್ದಾರೆ. ನದಿ ತೀರದ ಭಾಗದಲ್ಲಿ ಹೀಗೂ ನಡೆಯುತ್ತವೆ ಎಂಬುದನ್ನು ಊಹಿಸಿದ್ದಾರೆ ಎನ್ನಬಹುದು. ಸಿನಿಮಾ ರೋಚಕತೆ, ಟ್ವಿಸ್ಟ್‌ಗಳಿಂದ ಕೂಡಿದ್ದರೂ, ಅದು ಕಥೆಗೆ ಹೆಚ್ಚು ಹತ್ತಿರ ಎನಿಸುವುದಿಲ್ಲ. ಕುತೂಹಲ ಸೃಷ್ಟಿಸಲು ದೃಶ್ಯಗಳನ್ನು ಸೃಷ್ಟಿಸಿದಂತಿದೆ. ಉಳಿದಂತೆ, ಗ್ರಾಮಾಂತರ ಭಾಷೆಯ ಸೊಗಡು ಆಪ್ತವಾಗಿದೆ. ಅಲ್ಲಲ್ಲಿ, ಡಬಲ್ ಮೀನಿಂಗ್ ಸಂಭಾಷಣೆಗಳಿಗೆ ಅಲ್ಲಲ್ಲಿ ಬ್ರೇಕ್ ಹಾಕುವ ಅವಕಾಶವಿತ್ತು. ಮೊದಲರ್ಧ ಪಾತ್ರಗಳ ಪರಿಚಯಕ್ಕೆ ಸೀಮಿತವಾಗಿ, ದ್ವಿತೀಯಾರ್ಧದಲ್ಲಿ ಕಥೆಯ ನೈಜತೆ ತೆರೆದುಕೊಳ್ಳುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಸ್ವಲ್ಪ ಡ್ರಾಮಾ ಸೃಷ್ಟಿಸಿದ್ದರೂ ಕಥೆಯನ್ನು ಊಹಿಸಬಹುದು.
ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿ ಅಭಿಜಿತ್ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಪಾತ್ರವನ್ನು ಚಿತ್ರದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು ಎನಿಸುತ್ತದೆ. ರಿಷಿಕಾ ರಾಜ್ ಪಾತ್ರ ಬಂದು ಹೋದರೂ, ಕಥೆಯನ್ನು ಮುಂದೆ ಸಾಗಿಸುತ್ತದೆ. ಹಳ್ಳಿ ಸೊಗಡಿನ ಪಾತ್ರಗಳಲ್ಲಿ ಲೋಕಿ, ಆರೋಹಿತಾ ಗೌಡ ಕಾಣಿಸಿಕೊಂಡಿದ್ದಾರೆ. ಬಲ ರಾಜವಾಡಿ, ರಘು ರಾಮನಕೊಪ್ಪ, ನವೀನ್ ಸಾಗರ್ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಜತಿನ್ ದರ್ಶನ್ ಸಂಗೀತ ಆಪ್ತವಾಗಿದೆ. ಛಾಯಾಗ್ರಾಹಕರಾದ ಸರಿನ್ ರವೀಂದ್ರನ್, ವಿದ್ಯಾಶಂಕರ್ ಪಿ. ಹಳ್ಳಿ ಸೊಗಡನ್ನು ಚೆನ್ನಾಗಿ ಸೆರೆಹಿಡಿದಿದ್ದಾರೆ.