ಜೈಲರ್ ಪ್ರಾರಂಭ; ರಜನಿಕಾಂತ್ ಮೊದಲ ಲುಕ್ ಬಿಡುಗಡೆ

Rajinikanth
Published on

ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ಕೊನೆಗೂ ಪ್ರಾರಂಭವಾಗಿದೆ. ಸೋಮವಾರ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿರುವುದಷ್ಟೇ ಅಲ್ಲ, ರಜನಿಕಾಂತ್ ಅವರ ಮೊದಲ ಪೋಸ್ಟರ್ ಸಹ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಲಾಗಿದೆ. ‘ಜೈಲರ್’ ಚಿತ್ರವು ರಜನಿಕಾಂತ್ ಅವರ 169ನೇ ಚಿತ್ರವಾಗಿದ್ದು, ಇದಕ್ಕೂ ಮುನ್ನ ‘ತಲೈವಾ 169’ ಎಂದು ಕರೆಯಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ಚಿತ್ರಕ್ಕೆ ‘ಜೈಲರ್’ ಎಂಬ ಹೆಸರಿಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಯ್ತು. ಈಗ ಚಿತ್ರೀಕರಣ ಸಹ ಪ್ರಾರಂಭವಾಗಿದೆ.

ಈ ಚಿತ್ರದಲ್ಲಿ ರಜನಿಕಾಂತ್​ಗೆ ನಾಯಕಿಯಾಗಿ ಐಶ್ವಯಾ ರೈ ನಟಿಸುತ್ತಾರೆ ಎಂದು ಮೊದಲು ಹೇಳಲಾಯ್ತು. ಆ ನಂತರ ತಮನ್ನಾ ಭಾಟಿಯಾ ನಟಿಸಬಹುದು ಎಂಬ ಇನ್ನೊಂದು ಸುದ್ದಿ ಕೇಳಿ ಬಂತು. ಮೂಲಗಳ ಪ್ರಕಾರ, ತಮನ್ನಾ ಅವರದ್ದು ನಾಯಕಿ ಪಾತ್ರ ಅಲ್ಲವಂತೆ. ಬದಲಿಗೆ ಅತಿಥಿ ಪಾತ್ರವಂತೆ. ಚಿತ್ರದಲ್ಲಿ ಬೇರೊಬ್ಬ ನಾಯಕಿ ಇರುತ್ತಾರಂತೆ. ಈ ಮಧ್ಯೆ, ಚಿತ್ರದಲ್ಲೊಂದು ಅತಿಥಿ ಪಾತ್ರವಿದ್ದು ಆ ಪಾತ್ರಕ್ಕಾಗಿ ತಮನ್ನಾ ಅವರನ್ನು ಕೇಳಲಾಗಿದೆ. ಬೇರೆ ಚಿತ್ರಗಳಾಗಿದ್ದರೆ ತಮನ್ನಾ ನೋ ಎನ್ನುತ್ತಿದ್ದರೇನೋ? ಆದರೆ, ಈ ಚಿತ್ರದಲ್ಲಿ ರಜನಿಕಾಂತ್ ಜತೆಗೆ ನಟಿಸುವ ಅವಕಾಶ ಸಿಕ್ಕಿದ್ದರಿಂದ, ಬೇರೆ ಯೋಚನೆ ಮಾಡದೆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ.

‘ಜೈಲರ್’ನಲ್ಲಿ ರಜನಿಕಾಂತ್ ಜತೆಗೆ ರಮ್ಯಾ ಕೃಷ್ಣ, ಪ್ರಿಯಾಂಕಾ ಅರುಳ್ ಮೋಹನ್, ಶಿವಕಾರ್ತಿಕೇಯನ್ ಮುಂತಾದವರು ನಟಿಸುತ್ತಿದ್ದು, ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆಯು ನಿರ್ವಿುಸುತ್ತಿದ್ದು, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net