

ಟಾಲಿವುಡ್ನಲ್ಲಿ 80ರ ದಶಕದಲ್ಲಿ ಅತ್ಯಂತ ಜನಪ್ರಿಯ ಜೋಡಿ ಎಂದರೆ ಅದು ಕೃಷ್ಣ ಮತ್ತು ಶ್ರೀದೇವಿ ಅವರದ್ದು. ‘ಸಮಾಜನಿಕಿ ಸವಾಲ್’, ‘ಘರಾನಾ ದೊಂಗ’, ‘ಬಂಗಾರು ಕೊಡುಕು’ ಸೇರಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಈ ಜೋಡಿ ನಟಿಸಿತ್ತು. ಈಗ್ಯಾಕೆ ಈ ವಿಷಯವೆಂದರೆ, ಕೃಷ್ಣ ಅವರ ಮಗ ಮಹೇಶ್ ಬಾಬು ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಇದೀಗ ನಾಯಕ- ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಶ್ರೀದೇವಿ ಎಷ್ಟೇ ಆದರೂ ಟಾಲಿವುಡ್ನಲ್ಲಿ ಮಿಂಚಿ ಬಾಲಿವುಡ್ಗೆ ಬಂದವರು. ಅವರ ಮಗಳು ಸಹ ಟಾಲಿವುಡ್ ಚಿತ್ರಗಳಲ್ಲಿ ನಟಿಸಲಿ ಎಂಬುದು ಅಭಿಮಾನಿಗಳ ಆಸೆ. ಹಾಗಾಗಿ ಜಾಹ್ನವಿ ಟಾಲಿವುಡ್ಗೆ ಎಂಟ್ರಿ ಕೊಡಬಹುದು ಎಂಬ ಸುದ್ದಿ ಆಗಾಗ ಕೇಳಿ ಬರುತ್ತಲೇ ಇರುತ್ತದೆ.
ಅದಕ್ಕೆ ಸರಿಯಾಗಿ, ಒಂದೊಳ್ಳೆಯ ಕಥೆ ಮತ್ತು ತಂಡ ಸಿಕ್ಕರೆ ಜಾಹ್ನವಿ ತೆಲುಗು ಚಿತ್ರರಂಗದಲ್ಲಿ ನಟಿಸುವುದಕ್ಕೆ ತಯಾರು ಎಂದು ಆಕೆಯ ತಂದೆ ಬೋನಿ ಕಪೂರ್ ಸಹ ಹೇಳಿಕೊಂಡು ಬಂದಿದ್ದಾರೆ. ಇದೀಗ ಮಹೇಶ್ ಬಾಬು ಅಭಿನಯದ 28ನೇ ಚಿತ್ರ ಸೆಟ್ಟೇರುವುದಕ್ಕೆ ಸಿದ್ಧವಾಗಿದ್ದು, ಈ ಚಿತ್ರಕ್ಕೆ ಜಾಹ್ನವಿಯನ್ನು ಕರೆತಂದರೆ ಹೇಗೆ ಎಂಬ ಗುಸುಗುಸು ಕೇಳಿಬರುತ್ತಿದೆ. ಜಾಹ್ನವಿಯ ಎಂಟ್ರಿ ಆದರೆ, ಚಿತ್ರದ ಕ್ಯಾನ್ವಾಸ್ ದೊಡ್ಡದಾಗುವುದಷ್ಟೇ ಅಲ್ಲ, ನಿರೀಕ್ಷೆಗಳು ಸಹ ಹೆಚ್ಚಾಗುತ್ತದೆ ಎಂಬುದು ಚಿತ್ರತಂಡದ ಲೆಕ್ಕಾಚಾರ. ಆದರೆ, ಜಾಹ್ನವಿ ನಟಿಸುವ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬೀಳಬೇಕಿದೆ.