ಕೋಮಲ್​ ಯಾಕೆ ಇಷ್ಟು ದಿನ ಚಿತ್ರರಂಗದಿಂದ ದೂರ ಇದ್ದರು? ಜಗ್ಗೇಶ್​ ಹೇಳುತ್ತಾರೆ ಕೇಳಿ …

Jaggesh
Published on

ಬೆಂಗಳೂರು: 'ಕೆಂಪೇಗೌಡ 2' ನಂತರ ಚಿತ್ರರಂಗದಿಂದ ದೂರವೇ ಇದ್ದ ಕೋಮಲ್​, '2020' ಎಂಬ ಚಿತ್ರದ ಮೂಲಕ ಮತ್ತೆ ನಟನೆಗೆ ವಾಪಸ್ಸಾಗಿದ್ದಾರೆ. ಈಗ 'ಕಾಲಾಯ ನಮಃ' ಎಂಬ ಚಿತ್ರದಲ್ಲಿ ಸದ್ಯದಲ್ಲೇ ನಟಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟರಾಗಿದ್ದ ಕೋಮಲ್​, ಸಿನಿಮಾಗಳನ್ನು ಕಡಿಮೆ ಮಾಡಿದ್ದೇಕೆ? ಚಿತ್ರರಂಗದಿಂದ ದೂರಾಗುತ್ತಿರುವುದೇಕೆ? ಇಂಥದ್ದೊಂದು ಪ್ರಶ್ನೆ ಬಂದರೆ ಆಶ್ಚರ್ಯವಿಲ್ಲ.

ಇಷ್ಟಕ್ಕೂ ಕೋಮಲ್​ ಯಾಕೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು ಎಂದು ಅವರ ಸಹೋದರ ಜಗ್ಗೇಶ್​ ಹೇಳಿದ್ದಾರೆ. ಕೋಮಲ್​ಗೆ ಕೇತು ದೆಸೆ ಇದ್ದಿದ್ದರಿಂದ, ತಾವೇ ಅವರಿಗೆ ಸ್ವಲ್ಪ ಹುಷಾರಾಗಿರು ಎಂದು ಹೇಳಿದ್ದರಂತೆ.

ಈ ಕುರಿತು ಮಾತನಾಡಿರುವ ಅವರು, 'ಬಹಳ ದಿನಗಳ ನಂತರ ಕೋಮಲ್​ ನಟನೆಗೆ ಮರಳಿದ್ದಾರೆ. ಚಿತ್ರಕ್ಕೆ 'ಕಾಲಾಯ ನಮಃ'. ಸರಿಯಾಗಿ ಹೇಳಬೇಕೆಂದರೆ, ಅದು 'ಕಾಲಾಯ ತಸ್ಮೈ ನಮಃ' ಎಂದಾಗಬೇಕಿತ್ತು. ಕೃಷ್ಣ ಹೇಳಿದ ಮಾತು ಪ್ರತಿಯೊಬ್ಬ ಮನುಷ್ಯರಿಗೂ ಸಲ್ಲುವಂತದ್ದು. ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಏರಿಳಿತಗಳನ್ನು ನೋಡುತ್ತಾನೆ. ಒಮ್ಮೆ ಮೇಲೆ ಹೋದರೆ, ಒಮ್ಮೆ ಕೆಳಗೆ ಇಳಿಯಬೇಕಾಗುತ್ತದೆ. ಪ್ರತಿಭೆ ಇದ್ದರೆ ಮತ್ತೆ ಒಳ್ಳೆಯ ದಿನಗಳನ್ನು ನೋಡುತ್ತಾನೆ. ಕೋಮಲ್​ಗೆ ಕೇತು ದೆಸೆ ಇತ್ತು. ಅವನಿಗೆ ಸಮಸ್ಯೆ ಇದೆ ಎಂದು ಏಳು ವರ್ಷಗಳ ಹಿಂದೆಯೇ ಹೇಳಿದ್ದೆ. ಹುಷಾರಾಗಿರುವಂತೆಯೂ ಹೇಳಿದ್ದೆ' ಎನ್ನುತ್ತಾರೆ ಜಗ್ಗೇಶ್.

ಇಂಥದ್ದೇ ಒಂದು ಸಮಸ್ಯೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಅವರಿಗೂ ಎದುರಾಗಿತ್ತಂತೆ. 'ಈ ದೆಸೆ ಬಂದಾಗ ಅಮಿತಾಭ್​ ಏಳು ವರ್ಷ ಮನೆಯಲ್ಲಿ ಇರಬೇಕಾಯಿತು. ಏಳು ವರ್ಷಗಳ ನಂತರ ಅಮರ್​ ಸಿಂಗ್​, ಅಮಿತಾಭ್​ ಅವರನ್ನು ಕರೆದುಕೊಂಡು ಹೋಗಿ ಅಮರನಾಥ ದರ್ಶನ ಮಾಡಿಸಿದರು. ಆ ನಂತರ ಅಮಿತಾಭ್​ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಈಗ ಅದೇ ಅಮಿತಾಭ್​ 200 ಕೋಟಿ ಟ್ಯಾಕ್ಸ್​ ಕಟ್ಟುತ್ತಾರೆ. ಕೋಮಲ್​ಗೂ ಅದೇ ಕೇತು ಸಮಸ್ಯೆ ಇತ್ತು. 2022ರಲ್ಲಿ ಮುಗಿಯುತ್ತದೆ. ಆ ನಂತರ 20 ವರ್ಷ ನಿನ್ನದೇ ಎಂದು ಚಾಲೆಂಜ್​ ಮಾಡಿದ್ದೆ. ಯಾವ ಕ್ಷೇತ್ರಕ್ಕೆ ಹೋದರೂ ಅವನು ಗೆಲ್ಲುತ್ತಾನೆ. ಅವನನ್ನು ಆ ಭಗವಂತನೇ ಕಾಪಾಡುತ್ತಾನೆ. ಅಂಥದ್ದೊಂದು ಕಾಲ ಈಗ ಕೋಮಲ್​ಗೆ ಬಂದಿದೆ' ಎನ್ನುತ್ತಾರೆ ಜಗ್ಗೇಶ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net