ಜಗ್ಗೇಶ್​| ನಲವತ್ತರ ನವರಸ; ನಿಜ ಹೇಳಬೇಕೆಂದರೆ ಆಸಕ್ತಿ ಕಡಿಮೆ ಆಗ್ತಿದೆ...

Jaggesh
Published on

ಬೆಂಗಳೂರು: ‘ನಿಜ ಹೇಳಬೇಕೆಂದರೆ ಆಸಕ್ತಿ ಕಡಿಮೆ ಆಗ್ತಿದೆ...’

ಕನ್ನಡ ಚಿತ್ರರಂಗದಲ್ಲಿ ನಟನಾಗಿ 40 ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿರುವ ನಟ ಜಗ್ಗೇಶ್ ಅವರ ಮುಂದಿನ ಚಿತ್ರ ಯಾವುದು, ಮುಂದಿನ ಚಿತ್ರಜೀವನ ಹೇಗಿರಬೇಕು ಎಂದು ಅವರು ಬಯಸುತ್ತಾರೆ ಎಂಬ ಪ್ರಶ್ನೆಗೆ, ನಟನೆಯಲ್ಲಿ ಆಸಕ್ತಿಯೇ ಕಡಿಮೆಯಾಗುತ್ತಿದೆ ಎಂಬ ಉತ್ತರ ಅವರಿಂದ ಬರುತ್ತದೆ.

‘ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ನನಗೆ ಇತ್ತೀಚೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಏಕತಾನತೆ ಕಾಡುತ್ತಿದೆ. ಹಾಗಾಗಿ ಏನೋ ಮಾಡಬೇಕು ಎಂದೆನಿಸುತ್ತಿಲ್ಲ. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಇನ್ನೊಂದು ಸೀಸನ್ ಮಾಡೋಣ ಎಂದು ರಾಘವೇಂದ್ರ ಹುಣಸೂರು ಬಂದಾಗ, ನನ್ನ ಕೈಲಿ ಆಗೋಲ್ಲ ಎಂದಿದ್ದೆ. ಕೊನೆಗೆ ಯೋಗರಾಜ್ ಭಟ್ರು, ರಕ್ಷಿತಾ ಎಲ್ಲ ಫೋನ್ ಮಾಡಿದರು. ನೀವು ಒಪ್ಪಿದ್ದರೆ 300 ಜನರಿಗೆ ಕೆಲಸ ಸಿಕ್ಕಿದಂತಾಗುತ್ತದೆ, ಅದರಿಂದ ಅವರ ಊಟ ನಡೆಯುತ್ತದೆ ಎಂದಾಗ ಒಪ್ಪಿಕೊಂಡೆ’ ಎಂದರು.

ನಾನು ರಾಜಕಾರಣಿ ಅಲ್ಲ: ‘ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ ವಾಗಿ. ನಾನು ಹೃದಯದಿಂದ ರಾಜಕಾರಣಿ ಅಲ್ಲ ಮತ್ತು 100 ಪರ್ಸೆಂಟ್ ರಾಜಕಾರಣಿಯಾಗಿ ಇರೋದಕ್ಕೂ ಸಾಧ್ಯವಿಲ್ಲ. ನಾನು 100 ಪರ್ಸೆಂಟ್ ನಟ. ರಾಜಕೀಯ ಅನ್ನೋದು ಒಂದು ಭಾಗ ಅಷ್ಟೇ’ ಎನ್ನುತ್ತಾರೆ ಜಗ್ಗೇಶ್.

ರೆಡ್ ಕಾರ್ಪೆಟ್ ಹಾಕುವುದಿಲ್ಲ: ‘ಎಷ್ಟೋ ಜನ ಚಿತ್ರರಂಗದಲ್ಲಿ ಯಶಸ್ವಿಯಾಗಲಿಲ್ಲ ಎಂದರೆ ಬೇಸರದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪ್ರತಿಯೊಂದಕ್ಕೂ ಒಂದು ವ್ಯವಸ್ಥೆ ಇದೆ. ಒಂದು ಮನೆಯನ್ನು ರಾತ್ರೋರಾತ್ರಿ ಕಟ್ಟುವುದಕ್ಕೆ ಆಗುವುದಿಲ್ಲ. ಹಾಗೆಯೇ ಮನುಷ್ಯ ಸಹ ತನ್ನನ್ನು ಕಟ್ಟಿಕೊಳ್ಳುವುದಕ್ಕೆ ಸಾಕಷ್ಟು ಕೃಷಿ ಮಾಡಬೇಕು. ಒಂದೇ ದಿನದಲ್ಲಿ ದೊಡ್ಡ ನಟನಾಗುವುದಕ್ಕೆ ಸಾಧ್ಯವಿಲ್ಲ. ಕಲೆಯಲ್ಲೇ ತೊಡಗಿಸಿಕೊಳ್ಳಬೇಕು ಎಂದರೆ ಅಭ್ಯಾಸ ಮಾಡಿ. ಆ ನಂತರ ಚಿತ್ರರಂಗಕ್ಕೆ ಬನ್ನಿ. ಇಲ್ಲಿ ರೆಡ್ ಕಾರ್ಪೆಟ್ ಹಾಸುವುದಕ್ಕೆ ಯಾರೂ ಇರುವುದಿಲ್ಲ. ಆರಂಭದಲ್ಲಿ ಸಾಕಷ್ಟು ಒದೆ ಬೀಳುತ್ತದೆ. ಮನಸ್ಸು ಗಟ್ಟಿ ಮಾಡಿಕೊಂಡು ಮುಂದುವರಿದರೆ ಒಂದಲ್ಲ ಒಂದು ದಿನ ಒಳ್ಳೆಯದಾಗುತ್ತದೆ. ಯಾವುದೂ ಅಸಾಧ್ಯವಲ್ಲ. ಆದರೆ, ಅದಕ್ಕೆ ತಾಳ್ಮೆ ಬೇಕಷ್ಟೇ’ ಎನ್ನುತ್ತಾರೆ ಅವರು.

ನಮ್ಮತನ ಉಳಿಸಿ: ‘ಕನ್ನಡ ಚಿತ್ರರಂಗ ಮತ್ತು ಭಾಷೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಅನಾಚಾರ ಹೆಚ್ಚಾಗುತ್ತಿದೆ. ಕಾನೂನಿನ ಮೂಲಕ ಚಪ್ಪಡಿಕಲ್ಲು ಎಳೆಯಲಾಗುತ್ತಿದೆ. ಪ್ರಮುಖವಾಗಿ ಈ ವಿಷಯದಲ್ಲಿ ಜಾಗೃತಿ ಅವಶ್ಯಕ. ಸಿನಿಮಾ ಆಗಲೀ, ಟಿವಿ ಆಗಲೀ ಭಾಷೆಯನ್ನು ಉಳಿಸಿಕೊಳ್ಳಬೇಕಿದೆ. ಪ್ಯಾನ್ ಇಂಡಿಯಾ ಎಂಬ ಸಂಸ್ಕೃತಿ ನಮ್ಮನ್ನು ಹಾಳು ಮಾಡುತ್ತಿದೆ. ಪ್ಯಾನ್ ಇಂಡಿಯಾ ಹೆಸರಲ್ಲಿ ಬೇರೆ ಭಾಷೆಯ ಚಿತ್ರಗಳು ಕನ್ನಡದಲ್ಲಿ ಬಿಡುಗಡೆ ಆಗುತ್ತಿವೆ. ಇದರಿಂದ ಯಾರೂ ಉದ್ಧಾರ ಆಗುವುದಿಲ್ಲ, ಯಾರಿಗೂ ಅವಕಾಶ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಬೇರೆಯವರ ಹತ್ತಿರ ಹೋಗಿ ಬೇಡುವ ಪರಿಸ್ಥಿತಿ ಬರುತ್ತದೆ. ಮೊದಲು ನಮ್ಮತನ ಉಳಿಸಿಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಭಾರಿ ಕಷ್ಟವಿದೆ ಎನ್ನುತ್ತಾರೆ ಜಗ್ಗೇಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net