

‘ನವರಸ ನಾಯಕ’ ಜಗ್ಗೇಶ್ ಅವರು ಯಾರಿಗಾದರೂ ದೊಡ್ಡ ಅಭಿಮಾನಿಯಾಗಿದ್ದರೆ ಅದು ಡಾ. ರಾಜಕುಮಾರ್ ಮಾತ್ರ. ಜಗ್ಗೇಶ್ ಯಾವಾಗಲೂ ರಾಜಕುಮಾರ್ ಅವರೊಂದಿಗೆ ಕಳೆದ ಕ್ಷಣಗಳನ್ನು ಸಭೆ-ಸಮಾರಂಭಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಮೆಲುಕು ಹಾಕುತ್ತಲೇ ಇರುತ್ತಾರೆ.
ಈಗ್ಯಾಕೆ ಈ ವಿಷಯ ಎಂದರೆ, ಜಗ್ಗೇಶ್ ಮತ್ತೊಮ್ಮೆ ಅಭಿಮಾನ ಮೆರೆದಿದ್ದಾರೆ. ಡಾ. ರಾಜಕುಮಾರ್ ಅವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಅವರು, ತಾವು ಅತೀ ಹೆಚ್ಚು ಪ್ರಶ್ನೆಗಳನ್ನು ಕೇಳಿರುವ ವ್ಯಕ್ತಿ, ಡಾ. ರಾಜಕುಮಾರ್ ಮಾತ್ರ ಎಂದು ನೆನಪಿಸಿಕೊಂಡಿದ್ದಾರೆ.
‘ನನ್ನ ಬದುಕಲ್ಲಿ ರಾಜಣ್ಣನ ಬಳಿ ಕೇಳಿದಷ್ಟು ಪ್ರಶ್ನೆ ಯಾರ ಬಳಿಯೂ ಕೇಳಿರಲಿಲ್ಲ. ಪಾಪ, ಸ್ವಲ್ಪವೂ ಬೇಜಾರಾಗದೆ ನನ್ನ ಎಲ್ಲಾ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಅದರಲ್ಲಿ ನಾನು ಮರೆಯದ್ದು, ‘ಜಗ್ಗೇಶು, ಯೋಗ ಒಂದು ಬಾರಿ ಬರುತ್ತದೆ. ಯೋಗ್ಯತೆ ಕೊನೆಯವರೆಗೂ ಉಳಿಯುತ್ತದೆ’ ಎಂಬ ಮಾತುಗಳು. ಇದನ್ನು ‘ರಾಜ್‌ಕುಮಾರ’ ಚಿತ್ರದಲ್ಲಿ ಆನಂದ ಬಳಸಿದ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.