ಜಗ್ಗೇಶ್.. 1963 ಮಾಡೆಲ್ ಮೇಡ್ ಇನ್ ಮಾಯಸಂದ್ರ!

jaggesh feb 18
Published on

ಬೆಂಗಳೂರು: ‘1963 ಮಾರ್ಚ್ 17, ಮಾಯಸಂದ್ರ ಮಾಡೆಲ್!’

- ಹೀಗೆಂದಾಕ್ಷಣ ಯಾವುದೋ ಹೊಸ ವಾಹನ ಮಾರುಕಟ್ಟೆಗೆ ಬಂದಿದೆ ಎಂದು ಭಾವಿಸಬೇಕಾಗಿಲ್ಲ. ಅಷ್ಟಕ್ಕೂ ಇದು ಜಗ್ಗೇಶ್ ಅವರ ಡಿಟೇಲ್ಸ್. ಹೌದು.. ಚಿತ್ರನಟ ನವರಸನಾಯಕ ಜಗ್ಗೇಶ್ ತಮ್ಮ ಬಗ್ಗೆ ಹೀಗೆ ಹೇಳಿಕೊಂಡು ಗಮನ ಸೆಳೆದಿದ್ದಾರೆ. ಅಭಿಮಾನಿಯೊಬ್ಬರು ‘ನಿಮಗೆ ವಯಸ್ಸೆಷ್ಟು?’ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದಕ್ಕೆ ಯಾವುದೇ ಮುಲಾಜು-ಮುಜುಗರವಿಲ್ಲದೆ ಪ್ರತಿಕ್ರಿಯಿಸಿದ ಜಗ್ಗೇಶ್, ವಯಸ್ಸನ್ನು ಹೇಳುವ ಜತೆಗೆ ತಮ್ಮ ಬಗ್ಗೆ ತಮಾಷೆಯಾಗಿಯೇ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘1963 ಮಾರ್ಚ್ 17, ಮಾಯಸಂದ್ರ ಮಾಡೆಲ್. ಪವರ್​ಫುಲ್ ಒಕ್ಕಲುತನ ಫ್ಯಾಕ್ಟರಿ. ಸ್ಟಿಲ್ ರ್ವಂಗ್ ಕಂಡಿಷನ್. ರಿ-ಸೇಲ್ ವ್ಯಾಲ್ಯೂ ಚೆನ್ನಾಗಿದೆ. ಪ್ರತಿವರ್ಷ ರಿ-ಕಂಡಿಷನ್ ತಪ್ಪದೇ ಆಗುತ್ತದೆ. ಇವತ್ತಿನ ಯಾವ ಮಾಡೆಲ್ ಗಾಡಿಗೂ ಸಮನಾಗಿ ಓಡುತ್ತದೆ. ವೆಹಿಕಲ್ ಕಂಡಿಷನ್ ಗುಡ್. ಫಿಟ್ ಟು ರನ್ ಎನದರ್ 25 ಈಯರ್ಸ್. ಸರ್ಟಿಫೈಡ್ ಬೈ ಶ್ರೀರಾಘವೇಂದ್ರ..’ ಎಂಬುದಾಗಿ ಅಭಿಮಾನಿಗೆ ಜಗ್ಗೇಶ್ ತಮಾಷೆಯ ಉತ್ತರ ನೀಡಿದ್ದಾರೆ. ಸಿನಿಮಾ ತಾರೆಯರು ಸಾಮಾನ್ಯವಾಗಿ ಸದಾ ಯಂಗ್ ಆಗಿಯೇ ಇರಲು ಬಯಸುತ್ತಾರೆ. ಹಲವರು ವಯಸ್ಸಾದರೂ ಚಾಮ್ರ್ ಉಳಿಸಿಕೊಂಡಿರುತ್ತಾರೆ. ಅದಾಗ್ಯೂ ಯಾರಾದರೂ ವಯಸ್ಸು ಕೇಳಿದರೆ ಕೆಲವು ವರ್ಷಗಳನ್ನು ಕಳೆದೇ ಹೇಳುವವರಿಗೇನೂ ಕಡಿಮೆ ಇಲ್ಲ. ಅಂಥದ್ದರಲ್ಲಿ ಜಗ್ಗೇಶ್ ನೇರವಾಗಿ ಅದರಲ್ಲೂ ವಿಭಿನ್ನವಾಗಿ ವಯಸ್ಸು ತಿಳಿಸಿದ ಕುರಿತು ಹಲವರು ಮೆಚ್ಚುಗೆ ಸೂಚಿಸಿದ್ದು, ಕೆಲವರು ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net