ಪಾತ್ರ ಮಾಡಿದ್ದಷ್ಟೇ ಅಲ್ಲ, ಕನ್ನಡದಲ್ಲಿ ಮಾತಾಡಿದ್ರಂತೆ ಬಾಬು ...

Robert - Jagapathi Babu
Published on

ಬೆಂಗಳೂರು: ತೆಲುಗಿನ ಜನಪ್ರಿಯ ನಟ ಜಗಪತಿ ಬಾಬುಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಸುದೀಪ್​ ಅಭಿನಯದ 'ಬಚ್ಚನ್​' ಮತ್ತು ನಿಖಿಲ್​ ಕುಮಾರ್​ ಅಭಿನಯದ 'ಜಾಗ್ವಾರ್​' ಚಿತ್ರದಲ್ಲಿ ಅವರು ನಟಿಸಿದ್ದರು. ಈಗ 'ರಾಬರ್ಟ್​' ಮತ್ತು 'ಮದಗಜ' ಚಿತ್ರಗಳಲ್ಲೂ ಅವರು ನಟಿಸುತ್ತಿದ್ದಾರೆ.

ಈ ಹಿಂದೆ ಎರಡು ಚಿತ್ರಗಳಲ್ಲಿ ಅವರು ನಟಿಸಿದ್ದರೂ, ಯಾವೊಂದು ಚಿತ್ರಕ್ಕೂ ಅವರು ಡಬ್​ ಮಾಡಿರಲಿಲ್ಲ. ಅವರ ಪಾತ್ರಕ್ಕೆ ಬೇರೆಯವರು ಡಬ್​ ಮಾಡುತ್ತಿದ್ದರು. ಈಗ ಇದೇ ಮೊದಲ ಬಾರಿಗೆ ಅವರು ದರ್ಶನ್​ ಅಭಿನಯದ 'ರಾಬರ್ಟ್​' ಚಿತ್ರಕ್ಕೆ ಅವರು ತಮ್ಮ ಪಾತ್ರಕ್ಕೆ ಡಬ್​ ಮಾಡಿದ್ದಾರೆ.

'ರಾಬರ್ಟ್​' ಚಿತ್ರದಲ್ಲಿ ಬಾಬು ಅವರು ನೆಗೆಟಿವ್​ ಪಾತ್ರವನ್ನು ಮಾಡಿದ್ದು, ಇತ್ತೀಚೆಗೆ ತಮ್ಮ ಪಾತ್ರದ ಡಬ್ಬಿಂಗ್​ ಕೆಲಸವನ್ನು ಮುಗಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ನಿರ್ದೇಶಕ ತರುಣ್​ ಸುಧೀರ್​, 'ಬಾಬು ಅವರು ಮೊದಲ ಬಾರಿಗೆ ಕನ್ನಡದಲ್ಲಿ ಡಬ್ಬಿಂಗ್​ ಮಾಡಿದ್ದಾರೆ. ಇಂಥ ದೊಡ್ಡ ನಟನ ಜತೆಗೆ ಕೆಲಸ ಮಾಡಿದ್ದು ನಮ್ಮ ತಂಡಕ್ಕೆ ಹೆಮ್ಮೆ. ಅವರ ಉಪಸ್ಥಿತಿಯಿಂದ ನಮ್ಮ ಚಿತ್ರ ಇನ್ನಷ್ಟು ಕಳೆಗಟ್ಟಿದೆ' ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, 'ರಾಬರ್ಟ್​' ಚಿತ್ರದ ಚಿತ್ರೀಕರಣ ಮುಗಿದು, ಏಳು ತಿಂಗಳಾಗಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್​ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಮಧ್ಯೆ, ಡಿಸೆಂಬರ್​ ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಇದೆಯಾದರೂ, ಚಿತ್ರತಂಡ ಈ ವಿಷಯವಾಗಿ ಇನ್ನೂ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ.

'ರಾಬರ್ಟ್​' ಚಿತ್ರದಲ್ಲಿ ದರ್ಶನ್ ಜತೆಗೆ ಆಶಾ ಭಟ್​, ವಿನೋದ್​ ಪ್ರಭಾಕರ್​, ಜಗಪತಿ ಬಾಬು, ಸೋನಲ್​ ಮಾಂತೆರೋ ಮುಂತಾದವರು ನಟಿಸಿದ್ದು, ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವುದು ತರುಣ್​ ಸುಧಿರ್​. ಇನ್ನು ಉಮಾಪತಿ ಶ್ರೀನಿವಾಸ್​ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net