ಜಾಕ್ಲೀನ್ ಒಂದೊಳ್ಳೆಯ ಕೆಲಸ ಮಾಡಿದ್ದಾರೆ … ಏನು ಹೇಳಿ ಅದು?

Jacqueline Fernandes - Final
Published on

ಮುಂಬೈ: ಜಾಕ್‌ಲೀನ್ ವೈಓಎಲ್‌ಓ ಫೌಂಡೇಶನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ, ಈ ಮೂಲಕ ಹಲವು ಸರ್ಕಾರೇತರ ಸಂಸ್ಥೆಗಳ ಜತೆಗೆ ಕೈಜೋಡಿಸಿ, ಕರೊನಾದಿಂದ ಸಂಕಷ್ಟಕ್ಕೆ ಈಡಾಗಿರುವ ಹಲವರಿಗೆ ಸಹಾಯ ಮಾಡುವುದಕ್ಕೆ ಮುಂದಾಗಿರುವುದು ಗೊತ್ತೇ ಇದೆ.

ಶುಕ್ರವಾರ ಎನ್​ಜಿಓ ಜತೆಗೆ ಸೇರಿಕೊಂಡ ಜಾಕ್​ಲೀನ್​, ಹಸಿದಿರುವವರಿಗೆ ಆಹಾರ ಹಂಚಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ಜಾಕ್​ಲೀನ್​, ಮುಂಬೈನ ಮಾಜಿ ಪೊಲೀಸ್​ ಕಮಿಷಿನರ್​ ಶಿವಾನಂದನ್​ ಅವರು ಸ್ಥಾಪಿಸಿರುವ ರೋಟಿ ಬ್ಯಾಂಕ್​ ಎಂಬ ಎನ್​ಜಿಓಗೆ ಭೇಟಿ ನೀಡುವ ಅವಕಾಶ ಇಂದು ಸಿಕ್ಕಿತು. ಈ ರೋಟಿಬ್ಯಾಂಕ್​ ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಹಸಿದಿರುವವರಿಗೆ ಆಹಾರ ವಿತರಣೆ ಮಾಡಿದ್ದು, ಇಂಥದ್ದೊಂದು ಸಂಸ್ಥೆಯ ಜತೆಗೆ ಕೈಜೋಡಿಸಿದ್ದು ನಿಜಕ್ಕೂ ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದಾರೆ.

ಇನ್ನು, ವೈಓಎಲ್‌ಒ ಎಂಬ ಸಂಸ್ಥೆ ಪ್ರಾರಂಭಿಸಿದ್ದರ ಬಗ್ಗೆ ಬರೆದುಕೊಂಡಿದ್ದ ಜಾಕ್​ಲೀನ್​, ವೈಓಎಲ್​ಒ ಎಂದರೆ, ಯೂ ಓನ್ಲೀ ಲಿವ್ ಒನ್ಸ್ ಅಂತ. ಅಂದರೆ, ಮನುಷ್ಯನಾಗಿ ಹುಟ್ಟುವುದೇ ಕಷ್ಟ. ಹಾಗಿರುವಾಗ, ಒಂದೊಳ್ಳೆಯ ಕೆಲಸ ಮಾಡು ಎಂಬುದು ಈ ಸಂಸ್ಥೆಯ ತಾತ್ಪರ್ಯ. ನಮಗಿರುವುದು ಒಂದೇ ಜೀವನ. ಅದರಲ್ಲೇ ನಾವು ಈ ಜಗತ್ತಿಗೆ ಏನಾದರೂ ವ್ಯತ್ಯಾಸ ತರುವಂತಹ ಕೆಲಸಗಳನ್ನು ಮಾಡಬೇಕಿದೆ. ಹಾಗಾಗಿ, ನಿಮ್ಮ ಹತ್ತಿರ ಅಗತ್ಯಕ್ಕಿಂತ ಹೆಚ್ಚಿದೆ ಎಂದನಿಸಿದರೆ, ಅಗತ್ಯವಿರುವವರಿಗೆ ನೆರವಾಗಿ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ವೈಓಎಲ್‌ಒ ಫೌಂಡೇಶನ್, ಹಲವು ಎನ್‌ಜಿಓಗಳ ಜತೆಗೆ ಕೈಜೋಡಿಸಿದೆ. ನೀವು ನಮ್ಮ ಜತೆಗೆ ಕೈಜೋಡಿಸಿ, ಅಗತ್ಯವಿರುವವರಿಗೆ ನೆರವಾಗಿ ಎಂದು ಜಾಕ್​ಲೀನ್​ ಹೇಳಿಕೊಂಡಿದ್ದಾರೆ.

ಕರೊನಾ ಎರಡನೆಯ ಅಲೆ ಹೆಚ್ಚಾದಂತೆ ಬಾಲಿವುಡ್‌ನ ಹಲವು ನಟ-ನಟಿಯರು ಸೋಂಕಿತರಿಗೆ ನೆರವಾಗಲು ತಮ್ಮದೇ ರೀತಿಯಲ್ಲಿ ಸಹಾಯಹಸ್ತ ಚಾಚುತ್ತಿದ್ದಾರೆ. ಈಗಾಗಲೇ ಅಕ್ಷಯ್ ಕುಮಾರ್, ಸೋನು ಸೂದ್, ಸುನೀತ್ ಶೆಟ್ಟಿ, ಅಜಯ್ ದೇವಗನ್ ಮುಂತಾದವರು ಅಗತ್ಯವಿರುವವರಿಗೆ ಸಹಾಯ ಮಾಡಿದ್ದಾರೆ. ಈಗ ಈ ಸಾಲಿಗೆ ಜಾಕ್‌ಲೀನ್ ಫರ್ನಾಂಡಿಸ್ ಸಹ ಸೇರಿದ್ದಾರೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net