

ಬೆಂಗಳೂರು: ಸಿನಿಮಾದಲ್ಲೊಂದು ಸಿನಿಮಾ ಹೊಸದೇನಲ್ಲ. ಈಗಾಗಲೇ ಚಿತ್ರರಂಗದ ಬಗ್ಗೆ, ಕಲಾವಿದರು ಮತ್ತು ತಂತ್ರಜ್ಞರ ಕುರಿತು ಹಲವು ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಇದುವರೆಗೂ ಸಂಕಲನಕಾರರ ಕುರಿತು ಯಾವೊಂದು ಚಿತ್ರವೂ ಬಂದಿರಲಿಲ್ಲ. ಈಗ ಆ ಕೊರಗೂ ನೀಗಿದೆ. "ಕಟಿಂಗ್ ಶಾಪ್' ಎಂಬ ಹೊಸ ಚಿತ್ರ ಸದ್ದಿಲ್ಲದೆ ತಯಾರಾಗಿದ್ದು, ಮೇ 20ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಟ್ರೇಲರ್ ಬಿಡುಗಡೆಯಾಗಿದ್ದು, ಸಂಕಲನಕಾರರಿಂದಲೇ ಅನಾವರಣಗೊಂಡಿದೆ.
"ಕಟಿಂಗ್ ಶಾಪ್'ಗೆ ಕಥೆ ಬರೆದು, ಹೀರೋ ಆಗಿ ನಟಿಸಿರುವುದು ಪ್ರವಿಣ್ ಕೆಬಿ. ಈ ಚಿತ್ರಕ್ಕೆ ಸಂಗೀತ ನಿರ್ದೇಶನವೂ ಅವರದ್ದೇ. ಇದುವರೆಗೂ ಕಿರುಚಿತ್ರಗಳನ್ನು ಮಾಡಿಕೊಂಡಿದ್ದ ಪ್ರವಿಣ್, ಕಾಲೇಜ್ನಲ್ಲಿರುವಾಗಲೇ ಈ ಕಥೆ ಮಾಡಿಟ್ಟುಕೊಂಡಿದ್ದರಂತೆ. "ಇಲ್ಲಿ ಹೀರೋಯಿಸಂ ಅಂತೇನೂ ಇಲ್ಲ. ಪ್ರತಿಯೊಂದು ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇದೆ' ಎನ್ನುತ್ತಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅರ್ಚನಾ ಕೊಟ್ಟಿಗೆ, "2016ರಲ್ಲಿ ನಾನು ಒಂದು ಚಾನಲ್ಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆ. ಆ ಕಾರ್ಯಕ್ರಮಕ್ಕೆ ಪ್ರವಿಣ್ ಸಂಗೀತ ಸಂಯೋಜಿಸುತ್ತಿದ್ದರು. ಪವನ್ ಸಹ ಆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲಿಂದ ನಾವೆಲ್ಲರೂ ಒಟ್ಟಿಗೆ ಸಾಗಿ ಬಂದಿದ್ದೇವೆ. ಈ ಚಿತ್ರದಲ್ಲಿ ದೀಪ ಎನ್ನುವ ಪಾತ್ರ ಮಾಡಿದ್ದೇನೆ. ಹೆಸರಿಗೆ ತಕ್ಕಂತೆ ಪ್ರವಿಣನ ಜೀವನದಲ್ಲಿ ಆಕೆ ದೀಪವಾಗಿರುತ್ತಾಳೆ' ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ.
ಈ ಚಿತ್ರವನ್ನು ಪವನ್ ಭಟ್ ನಿರ್ದೇಶನ ಮಾಡಿದ್ದು, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ. ಪ್ರವಿಣ್ ಮತ್ತು ಅರ್ಚನಾ ಜತೆಗೆ ಹಿರಿಯ ನಿರ್ದೇಶಕ ಭಗವಾನ್, ಓಂಪ್ರಕಾಶ್ ರಾವ್, ವತ್ಸಲಾ ಮೋಹನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.