

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಲವಾರು ಕಥೆ, ಕಾದಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಆ ಸಾಲಿಗೆ ಸೇರುವ ಸಿನಿಮಾ ‘ಅನ್ನ‘. ಹನೂರು ಚೆನ್ನಪ್ಪ ಅವರ 2004ರಲ್ಲಿ ಕಥಾಸಂಕಲನ ಪ್ರಕಟಿಸಿದ್ದರು. ಅದರಲ್ಲಿ ‘ಅನ್ನ‘ ಎಂಬ 22 ಪುಟಗಳ ಕಥೆಯಿದ್ದು, ಇದೀಗ 20 ವರ್ಷಗಳ ನಂತರ ಸಿನಿಮಾ ರೂಪ ಪಡೆದಿದೆ. ಈ ಚಿತ್ರಕ್ಕೆ ಎನ್.ಎಸ್. ಇಸ್ಲಾಹುದ್ದೀನ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರದ ಬಗ್ಗೆ ಅವರು, ’ನಾನು ಮೂಲತಃ ಮೈಸೂರಿನವನು, ರಂಗಾಯಣದಲ್ಲಿ ತರಬೇತಿ ಪಡೆದು ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಾ, ನಾಟಕಗಳನ್ನ ನಿರ್ದೇಶನ ಮಾಡಿದ್ದೇನೆ. ನಾಲ್ಕು ಗೋಲ್ಡ್ ಮೆಡಲ್ ಪಡ್ದಿದ್ದೀನಿ. ಇಂಗ್ಲೆಂಡ್ ನಲ್ಲಿ ಫಿಲಂ ಮೇಕಿಂಗ್ ತರಬೇತಿಯನ್ನು ಕೂಡ ಪಡೆದು ಬಂದೆ. ಟಿವಿ ಚಾನೆಲ್ ಗಳಲ್ಲಿ ಕೂಡ ಕೆಲಸ ಮಾಡಿದ್ದೇನೆ. ಒಮ್ಮೆ ನನ್ನ ಗೆಳೆಯ ಸಂಗೀತ ನಿರ್ದೇಶಕ ನಾಗೇಶ್ ಕಂದೀಗಾಲ ಈ ಕಥೆಯ ಬಗ್ಗೆ ಹೇಳಿದರು. ಇದು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಂತ ಹನೂರು ಚೆನ್ನಪ್ಪನವರ ಕಥಾಸಂಕಲನದ ಅನ್ನ ಎಂಬ ಕಥೆಯ ಬಗ್ಗೆ ತಿಳಿದುಕೊಂಡು ಒಂದಷ್ಟು ಈ ಕಥೆಯ ಮೇಲೆ ಕೆಲಸವನ್ನು ಆರಂಭಿಸಿದ್ವಿ. 80ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಕೆಲ ಹಳ್ಳಿಗಾಡುಗಳಲ್ಲಿ ಅನ್ನ ಹಬ್ಬದ ದಿನ ಮಾತ್ರ ಮಾಡುವುದು ಅಂತ ತಿಳಿದಿತ್ತು. ಈ ಕಥೆಯು ಇದರ ಸುತ್ತವೇ ತಿರುಗಲಿದ್ದು, ಅನ್ನ ಎಷ್ಟು ಮುಖ್ಯ? ಅದರ ಮಹತ್ವ ಏನು? ಎಂಬುದರ ಜೊತೆಗೆ ಹಳ್ಳಿಯ ಬಡಕುಟುಂಬದಲ್ಲಿ ಬೆಳೆದ ಹುಡುಗನೊಬ್ಬ ಜಾತ್ರೆಯಲ್ಲಿ ನಾಪತ್ತೆಯಾಗಿ ತದನಂತರ ಅವನು ಹುಡುಕಾಟದಲ್ಲಿ ಎದುರಾಗುವ ಒಂದಷ್ಟು ಸಮಸ್ಯೆಗಳ ನಡುವೆ ಅನ್ನದ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇವೆ‘ ಎಂದು ಮಾಹಿತಿ ನೀಡುತ್ತಾರೆ.
ಸಾಹಿತಿ ಹನೂರು ಚೆನ್ನಪ್ಪ, ’ನನ್ನದು ಚಾಮರಾಜನಗರ. ಒಮ್ಮೆ ನನ್ನ ಕಣ್ಣೆದುರೇ ಒಬ್ಬ ಹುಡುಗ ಆಟವಾಡುತ್ತ ಸಾಗಿದ, ನನ್ನ ಜೊತೆ ಇದ್ದವರು ಈ ಹುಡುಗ ಯಾರು ಎಂದು ಗೊತ್ತಾ ಎನ್ನುತ್ತಾ , ಸುಮಾರು ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಹುಡುಗ ಇವನೇ ಎಂದರು. ಕಾರಣ ಕೇಳಿದಾಗ ತಿಳಿಯಿತು , ಹಬ್ಬಗಳಲ್ಲಿ ಮಾತ್ರ ಅನ್ನವನ್ನು ನೋಡುತ್ತಿದ್ದವನ ಬದುಕಲ್ಲಿ ನಿತ್ಯ ಅನ್ನ ಕಾಣುವಂತದಾಗ ಏನಾಗಬಹುದು ಎಂಬ ವಿಚಾರ. ಅದೇ ನನ್ನ ಈ ಕಥೆಗೆ ಸ್ಫೂರ್ತಿ‘ ಎಂದರು. ಇನ್ನು ಮಾಸ್ಟರ್ ನಂದನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ‘ ಮಾತನಾಡುತ್ತಾ ’ನಾನು ಮಹದೇವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಆಕ್ಟ್ ಮಾಡುವಾಗ ನಿರ್ದೇಶಕರು ಬಹಳಷ್ಟು ಹೇಳಿಕೊಟ್ಟಿದ್ದಾರೆ. ನಾನು ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ನನ್ನ ಅಪ್ಪ ಕಾರಣ. ನಾನು ಮೊಬೈಲಲ್ಲಿ ಮಾಡುತ್ತಿದ್ದ ರೀಲ್ಸ್ ಮೂಲಕ ನನಗೆ ಈ ಅವಕಾಶ ಸಿಕ್ಕಿತ್ತು. ಅನ್ನಕ್ಕೆ ನಾವು ಗೌರವ ಕೊಡಬೇಕು, ವೇಸ್ಟ್ ಮಾಡಬಾರದು ಎಂಬುವುದರ ಬಗ್ಗೆ ಈ ಸಿನಿಮಾ ಇದೆ‘ ಎನ್ನುತ್ತಾರೆ.
ಉಳಿದಂತೆ ಈ ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ಪದ್ಮಶ್ರೀ, ಸಿದ್ದು ಪ್ರಸನ್ನ , ಸಂಪತ್ ಮೈತ್ರಿಯ , ಬಾಲ ರಾಜವಾಡಿ , ರಮೇಶ್ ಸಿದ್ದಯ್ಯನಪುರ , ನಾಗಶ್ರೀ ಸೇರಿದಂತೆ ಆ ಸುತ್ತಮುತ್ತ ಊರಿನ ಪ್ರತಿಭೆಗಳನ್ನು ಕೂಡ ಒಗ್ಗೂಡಿಸಿಕೊಂಡು ಒಂದಷ್ಟು ತರಬೇತಿ ನೀಡಿ ಚಿತ್ರದಲ್ಲಿ ಬಳಸಿಕೊಂಡಿದ್ದಾರಂತೆ. ಇನ್ನು ಈ ಚಿತ್ರಕ್ಕೆ ಮಧು ಸಗತ ಛಾಯಾಗ್ರಹಣ , ಟಿ. ಗುರುಸ್ವಾಮಿ ಸಂಕಲನ , ಎನ್. ಮಹೇಶ್ವರ ಕಲಾ ನಿರ್ದೇಶನ , ಬಿ .ಎನ್. ಸಿದ್ದು ಪ್ರಸನ್ನ ಸಂಭಾಷಣೆ ಮಾಡಿದ್ದು ಚಿತ್ರಿಕರಣದ ಅನುಭವಗಳನ್ನು ಹಂಚಿಕೊಂಡರು. ಗ್ರಾಮೀಣ ಭಾಗದ ಸೊಗಡಿನ ಜೊತೆಗೆ ಅನ್ನದ ಮಹತ್ವವನ್ನು ಸಾರಲು ಹೊರಟಿರುವ ಈ ಚಿತ್ರ ನಾಳೆ ತೆರೆಗೆ ಬರಲಿದೆ.