ನಾಗರತ್ನಮ್ಮ ಆಗ್ತಾರಾ ಸಮಂತಾ ಅಕ್ಕಿನೇನಿ?

Ullasa-1
Published on

ಬೆಂಗಳೂರು: ಕರ್ನಾಟಕ ಮೂಲದ ಸಾಮಾಜಿಕ ಹೋರಾಟಗಾರ್ತಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಗಾರ್ತಿ ಬೆಂಗಳೂರು ನಾಗರತ್ನಮ್ಮ ಅವರ ಜೀವನಗಾಥೆ ಬೆಳ್ಳಿತೆರೆಮೇಲೆ ಮೂಡಿಬರಲಿದೆ ಎಂಬ ಸುದ್ದಿ ಹಿಂದೆಯೇ ಹರಿದಾಡಿತ್ತು. ಟಾಲಿವುಡ್​ನ ಖ್ಯಾತ ನಟಿ ಮತ್ತು ಕನ್ನಡತಿ ಅನುಷ್ಕಾ ಶೆಟ್ಟಿ ನಾಗರತ್ನಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ಅದೇ ಸಿನಿಮಾ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಅನುಷ್ಕಾ ಶೆಟ್ಟಿ ಜಾಗಕ್ಕೆ ಸಮಂತಾ ಅಕ್ಕಿನೇನಿ ಎಂಟ್ರಿ ಪಡೆದಿದ್ದಾರಂತೆ! ಭಾರತೀಯ ಸಿನಿಮಾಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮೇರು ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್, ಈ ಮೊದಲು ಬೆಂಗಳೂರು ನಾಗರತ್ನಮ್ಮ ಅವರ ಬಯೋಪಿಕ್ ಮಾಡುವ ಬಗ್ಗೆ ಹೇಳಿಕೊಂಡಿದ್ದರು. ಆಗ ಅನುಷ್ಕಾ ಶೆಟ್ಟಿಗೆ ಅಪ್ರೋಚ್ ಮಾಡಿದ್ದರಾದರೂ, ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಪ್ರಾಜೆಕ್ಟ್​ನಿಂದ ಅನುಷ್ಕಾ ಹಿಂದೆ ಸರಿದಿದ್ದರು. ಇದೀಗ ಅನುಷ್ಕಾ ಮಾಡಬೇಕಿದ್ದ ಪಾತ್ರ ಸಮಂತಾ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ನಾಗರತ್ನಮ್ಮ ಕತೆ ಕೇಳಿರುವ ಸಮಂತಾ, ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಅಷ್ಟೇ ಅಲ್ಲ ಈ ಸಿನಿಮಾಗೋಸ್ಕರ ಕಳೆದ ವರ್ಷ ಒಪ್ಪಿಕೊಂಡ ಸಿನಿಮಾವೊಂದನ್ನು ಕೈ ಬಿಟ್ಟಿದ್ದಾರಂತೆ. ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಸಿನಿಮಾ ಮೂಡಿಬರಲಿದ್ದು, ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಸೆಟ್ಟೇರುವುದಕ್ಕೆ ತಡವಾ ಗುತ್ತಿದೆ. ವರ್ಷಾಂತ್ಯಕ್ಕೆ ಶೂಟಿಂಗ್​ಗೆ ಚಾಲನೆ ನೀಡುವುದು ಚಿತ್ರ ತಂಡದ ಯೋಜನೆ. 88ರ ಇಳಿವಯಸ್ಸಿನ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್, ಕನ್ನಡದಲ್ಲಿ ಡಾ. ರಾಜಕುಮಾರ್ ನಟನೆಯ ‘ಹಾಲು ಜೇನು’, ‘ಚಲಿಸುವ ಮೋಡಗಳು’, ‘ಶ್ರಾವಣ ಬಂತು’, ಜ್ವಾಲಾಮುಖಿ, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಸೇರಿ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net