

ಇಡೀ ದಕ್ಷಿಣ ಭಾರತದಲ್ಲೇ ಮೋಸ್ಟ್ ವಾಂಟೆಡ್ ನಟಿ ಎಂದರೆ ಅದು ಕೀರ್ತಿ ಸುರೇಶ್. ಯಾವಾಗ, ‘ಮಹಾನಟಿ’ ಚಿತ್ರ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಯಿತೋ, ಅಲ್ಲಿಂದ ಕೀರ್ತಿಗೆ ಶುಕ್ರದೆಸೆ ಆರಂಭವಾಯಿತು. ಅಲ್ಲಿಂದ ಒಂದರ ಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿರುವ ಅವರು ಸದ್ಯ ತಮಿಳಿನಲ್ಲಿ ರಜನಿಕಾಂತ್ ಅಭಿನಯದ ‘ಅಣ್ಣತ್ತಿ’, ‘ಪೆಂಗ್ವಿನ್’, ತೆಲುಗಿನಲ್ಲಿ ‘ರಂಗ್‌ದೇ’, ‘ಮಿಸ್ ಇಂಡಿಯಾ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಈ ನಡುವೆಯೇ ಕೀರ್ತಿಗೆ ಕಂಕಣ ಬಲ ಕೂಡಿ ಬಂದಿದೆ ಮತ್ತು ಕೀರ್ತಿ ಸದ್ಯದಲ್ಲೇ ದೊಡ್ಡ ರಾಜಕಾರಣಿಯ ಮಗನ ಜತೆಗೆ ಹಸೆಮಣೆ ಏರಲಿದ್ದಾರೆ ಎಂಬಂತಹ ಸುದ್ದಿಗಳು ಕಳೆದೊಂದು ದಿನದಿಂದ ಓಡಾಡುತ್ತಿದೆ.
ಹೌದು, ಕೀರ್ತಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ. ಕೀರ್ತಿ ಅವರ ತಂದೆ ಸುರೇಶ್, ಕೇರಳದಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲಿನ ದೊಡ್ಡ ನಾಯಕರೊಬ್ಬರ ಮಗನ ಜತೆಗೆ ಕೀರ್ತಿ ಅವರ ಮದುವೆ ಫಿಕ್ಸ್ ಮಾಡಿದ್ದು, ಒಪ್ಪಿಕೊಂಡಿರುವ ಚಿತ್ರಗಳೆಲ್ಲಾ ಮುಗಿಸಿದ ಮೇಲೆ ಕೀರ್ತಿ ಮದುವೆಯಾಗಲಿದ್ದಾರೆ ಎಂದು ಕೇಳಿ ಬರುತ್ತಿದೆ. ಅಂದಹಾಗೆ, ಆ ರಾಜಕಾರಣಿಯ ಮಗ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದು, ಚಿತ್ರರಂಗದಿಂದ ಬಹಳ ದೂರವಂತೆ.
ಕೀರ್ತಿ ಮದುವೆಯಾಗುತ್ತಿರುವ ಸುದ್ದಿ ನಿಜವಾ ಎಂಬುದರಲ್ಲಿ ಸ್ಪಷ್ಟತೆ ಇಲ್ಲ. ಏಕೆಂದರೆ, ಈ ಕುರಿತು ಅವರಾಗಲೀ, ಅವರ ಕುಟುಂಬದವರಾಗಲೀ ಯಾರೂ ಪ್ರತಿಕ್ರಿಯೆ ನೀಡಿಲ್ಲ. ನಿಜ, ಸುಳ್ಳು ಏನೊಂದೂ ಮಾತಾಡಿಲ್ಲ. ಮೂಲಗಳ ಪ್ರಕಾರ, ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಕೀರ್ತಿಗೆ ಸದ್ಯಕ್ಕೆ ಮದುವೆಯಾಗುವ ಯಾವುದೇ ಆಸಕ್ತಿ ಇಲ್ಲವಂತೆ. ಕೀರ್ತಿ ತಮ್ಮ ವೃತಿಯ ಬಗ್ಗೆ ಹೆಚ್ಚು ಫೋಕಸ್ ಆಗಿದ್ದು, ಸದ್ಯಕ್ಕೆ ಮದುವೆಯಿಂದ ದೂರ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯ ಬಗ್ಗೆ ಕೀರ್ತಿ ಏನೆಂದು ಪ್ರತಿಕ್ರಯಿಸುತ್ತಾರೋ ಎಂಬ ಕುತೂಹಲ ಎಲ್ಲರಿಗೂ ಇದೆ.